ನವದೆಹಲಿ: ಲುಧಿಯಾನ ಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಜರ್ಮನಿಗೆ ತೆರಳಿ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ವಿಚಾರಣೆ ನಡೆಸಲಿದೆ.
ಎನ್‌ಐಎ ಅಧಿಕಾರಿಗಳು ಮುಲ್ತಾನಿಯನ್ನು ಭಾರತಕ್ಕೆ ಕರೆತರಲು ಪ್ರಕ್ರಿಯೆ ಪ್ರಾರಂಭಿಸಲಿದೆ. ಆದರೆ ಅದಕ್ಕೂ ಮೊದಲು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಇತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಡಿ ಆರೋಪಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲು ಎನ್ಐಎ ಪ್ರಕ್ರಿಯೆ ನಡೆಸುತ್ತಿದೆ.
ಖಲಿಸ್ತಾನ್ ಬೆಂಬಲಿಗರು ಪಂಜಾಬ್‌ನಲ್ಲಿ ಯುವಕರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ಕಾರ್ಯಸೂಚಿ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮದ ವೇದಿಕೆಗಳನ್ನು ಬಳಸುತ್ತಿದ್ದಾರೆ. ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಅವರ ಚಟುವಟಿಕೆಗಳು ಉಲ್ಬಣಗೊಂಡಿವೆ ಎಂದು ಎನ್‌ಐಎ ಅಧಿಕಾರಿ ಹೇಳಿದರು.
ಮುಲ್ತಾನಿಯನ್ನು ಜರ್ಮನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಲುಧಿಯಾನ ಸ್ಫೋಟ ಪ್ರಕರಣದಲ್ಲಿ ಮುಲ್ತಾನಿ ಭಾಗಿಯಾಗಿರುವ ಬಗ್ಗೆ ನಮಗೆ ಬಲವಾದ ಪುರಾವೆಗಳು ಸಿಕ್ಕಿರುವುದರಿಂದ ಆರೋಪಿಯನ್ನು ವಿವರವಾಗಿ ಪ್ರಶ್ನಿಸಲು ಎನ್‌ಐಎ ತಂಡ ಜರ್ಮನಿಗೆ ತಲುಪಲಿದೆ ಎಂದು ಅವರು ಹೇಳಿದರು.
ಡಿಸೆಂಬರ್ 23 ರಂದು ಲುಧಿಯಾನ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದರು.