ನವದೆಹಲಿ: ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಉಗ್ರ ತರಬೇತಿ ಮತ್ತು ನೇಮಕಾತಿ ಪ್ರಕರಣಕ್ಕೆ ಸಂಬಂಧಸಿದಂತೆ ರಾಷ್ಟ್ರೀಯ ತನಿಖಾ ದಳ ಇಂದು ತೆಲಂಗಾಣ ಮತ್ತು ತಮಿಳುನಾಡುವಿನ ವಿವಿಧ 30 ಸ್ಥಳಗಳಲ್ಲಿ ದಾಳಿ ನಡೆಸಿದೆ. ತಮಿಳುನಾಡಿನಲ್ಲಿ, ಚೆನ್ನೈನ 3 ಕಡೆ, ಕೊಯಮತ್ತೂರಿನ 21 ಸ್ಥಳಗಳು ಮತ್ತು ತೆಂಕಶಿಯ ಎಂಬಲ್ಲಿ ಒಂದು ಕಡೆ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ ಐದು ಸ್ಥಳಗಳಲ್ಲಿ ಸಂಸ್ಥೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ಕೊಯಮತ್ತೂರಿನ ಕೋವೈ ಅರೇಬಿಕ್ ಕಾಲೇಜಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಕೂಡ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ಟೋಬರ್ 23, 2022ರಂದು ಕೊಯಮತ್ತೂರಿನ ಉಕ್ಕಡಂ ಬಳಿಯ ಕೋಟಾ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಮಾರುತಿ ಕಾರು ಸ್ಫೋಟ ಸಂಭವಿಸಿತ್ತು. ಸ್ಪೋಟಕ ವಸ್ತುಗಳೊಂದಿಗೆ ಕಾರು ಚಲಾಯಿಸುತ್ತಿದ್ದ ಹಾಗೂ ಐಸಿಸ್ನೊಂದಿಗೆ ಸಂಪರ್ಕ ಹೊಂದಿದ್ದ ಜೇಮ್ಸಾ ಮುಬಿನ್ ಎಂಬ ಆರೋಪಿ ಸಾವನ್ನಪ್ಪಿದ್ದ.
ಘಟನೆ ಸಂಬಂಧ ಉಕ್ಕಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಮೃತ ಮುಬಿನ್ ಕೋವೈ ಅರೆಬಿಕ್ ಕಾಲೇಜಿನ ವಿದ್ಯಾರ್ಥಿ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅಲ್ಲದೇ ಸ್ಪೋಟಕ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರ 20ಕ್ಕೂ ಹೆಚ್ಚು ಜನರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2022ರ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಕೊಯಮತ್ತೂರಿನ ಐಸಿಸ್ ಪ್ರೇರಿತ ಮತ್ತೊಬ್ಬ ಆರೋಪಿಯನ್ನು ಎನ್ಐಎ ಅಧಿಕಾರಿಗಳು ವರ್ಷದ ಆರಂಭದಲ್ಲಿ ಬಂಧಿಸಿದ್ದರು. ಆತನನ್ನು ಮೊಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜರ್ ಎಂದು ಗುರುತಿಸಲಾಗಿತ್ತು. ಈತ ಈ ಪ್ರಕರಣದಲ್ಲಿ 13ನೇ ಬಂಧಿತ ವ್ಯಕ್ತಿಯಾಗಿದ್ದಾನೆ. 12ನೇ ಆರೋಪಿ ಮೊಹಮ್ಮದ್ ಇದ್ರಿಸ್ ನನ್ನು ಈ ವರ್ಷ ಆಗಸ್ಟ್ 2 ರಂದು ಬಂಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಪೂನಮಲ್ಲಿಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಇದುವರೆಗೂ ಎರಡು ದೋಷಾರೋಪಪಟ್ಟಿಗಳನ್ನು ಸಲ್ಲಿಸಿದೆ. ಏಪ್ರಿಲ್ 20 ರಂದು ಆರು ಆರೋಪಿಗಳು ಮತ್ತು ಜೂನ್ 2 ರಂದು ಐವರ ವಿರುದ್ಧ ಆರೋಪ ಪಟ್ಟಿಯನ್ನು ಎನ್ಐಎ ಸಲ್ಲಿಸಿದೆ. ಇನ್ನು ಉಕ್ಕಡಂ ಜಿ.ಎಂ. ನಗರ ಪ್ರದೇಶದಲ್ಲಿನ ಕೌನ್ಸಲರ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಉರಿ ಪ್ರದೇಶದಲ್ಲಿ ಸೇನೆ ಉಗ್ರರ ನಡುವೆ ಕಾಳಗ: ಮೂವರು ಭಯೋತ್ಪಾದಕ ಮಟ್ಯಾಷ್.. ಮುಂದುವರಿದ ಕಾರ್ಯಾಚರಣೆ