ಬೆಂಗಳೂರು/ಮುಂಬೈ: ದೇಶಾದ್ಯಂತ ಭಯೋತ್ಪಾದಕ ಕೃತ್ಯ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು 'ಐಸಿಸ್' ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕರ್ನಾಟಕ ಮತ್ತು ಮಹಾರಾಷ್ಟ್ರದ 44ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಪುಣೆ ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ಬಂಧಿಸಲಾಗಿದೆ.
ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು ಸ್ಥಳಗಳ ಪೈಕಿ ಕರ್ನಾಟಕದಲ್ಲಿ ಒಂದು ಸ್ಥಳ, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ ಒಂದು ಸ್ಥಳವನ್ನು ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಪರಿಶೀಲನೆ: ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ಮನೆಯೊಂದರಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಅಲ್-ಖೈದಾ ಮತ್ತು ಐಸಿಸ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತದ ಬೆಳವಣಿಗೆಗೆ ಪ್ರತಿಜ್ಞೆ ಮಾಡಿದ ಆರೋಪಿಗಳು ಮತ್ತು ಅವರ ಸಹಚರರು ರೂಪಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ್ದಾಗಿದೆ ಮತ್ತು ಭಯೋತ್ಪಾದಕ ಗ್ಯಾಂಗ್ ಅನ್ನು ರಚಿಸಿರುವ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ ಈ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ. (ANI)
ಇದನ್ನೂ ಓದಿ: ಮೋದಿ ವಿಶ್ವದಲ್ಲೇ ಜನಪ್ರಿಯ ನಾಯಕ... ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ನಂಬರ್ 1 ಸ್ಥಾನ