ಕೊಯಮತ್ತೂರು (ತಮಿಳುನಾಡು): ಕಳೆದ ವರ್ಷ ಅಕ್ಟೋಬರ್ 23 ರಂದು ಕೊಟ್ಟೈಮೇಡುವಿನ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಚುರುಕುಗೊಳಿಸಿದೆ. ಎರಡು ದಿನಗಳ ತೀವ್ರ ವಿಚಾರಣೆಯ ಬಳಿಕ ದಕ್ಷಿಣ ಉಕ್ಕಡಂನ ಜಿಎಂ ನಗರದ ನಿವಾಸಿ ಮೊಹಮ್ಮದ್ ಇದ್ರಿಸ್ (25) ಎಂಬಾತನನ್ನು ಬಂಧಿಸಿ, ವಿಚಾರಣೆ ಮುಂದುವರೆಸಲಾಗಿದೆ.
ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, "ಬಂಧಿತ ಇದ್ರಿಸ್, ಕೊಟ್ಟೈಮೇಡುವಿನ ಹೆಚ್‌ಎಂಪಿಆರ್ ಸ್ಟ್ರೀಟ್‌ನ ಜಮೀಶಾ ಮುಬೀನ್ (29) ಎಂಬ ಆತ್ಮಹತ್ಯಾ ಬಾಂಬರ್ ನಿಕಟ ಸಹಚರ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಕಾರು ಬಾಂಬ್ ಸ್ಫೋಟದ ಹಿಂದಿನ ಕ್ರಿಮಿನಲ್ ಪಿತೂರಿಯಲ್ಲಿ ಈತನ ಕೈವಾಡವಿದೆ. ಇದ್ರಿಸ್ ವಿರುದ್ಧ ಮೂರು ವರ್ಷದ ಕರೆ ದಾಖಲೆಗಳು ಸೇರಿದಂತೆ ಕೆಲ ಅಗತ್ಯ ಮಾಹಿತಿಯನ್ನು ರಾಷ್ಟ್ರೀಯ ಗುಪ್ತಚರ ಸಂಸ್ಥೆ ಅಧಿಕಾರಿಗಳು ಕಲೆಹಾಕುವ ಮೂಲಕ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ, ಇತರ ಬಂಧಿತ ವ್ಯಕ್ತಿಗಳ ಹೇಳಿಕೆಗಳು ಕೂಡ ಪಿತೂರಿಯಲ್ಲಿ ಇದ್ರಿಸ್ ಭಾಗಿಯಾಗಿರುವುದನ್ನು ದೃಢಪಡಿಸಿವೆ" ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಇದ್ರಿಸ್ನನ್ನು ರಾಷ್ಟ್ರೀಯ ಗುಪ್ತಚರ ದಳದ ಅಧಿಕಾರಿಗಳು ಇಂದು ಬೆಳಗ್ಗೆ ಪೂಂತಮಲ್ಲಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮುಂದಾಗಿದ್ದಾರೆ. ಕೊಯಮತ್ತೂರು ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, ಮೊಹಮ್ಮದ್ ಇದ್ರಿಸ್ 12ನೇ ವ್ಯಕ್ತಿ.
ಏನಿದು ಪ್ರಕರಣ? : ಕೊಯಮತ್ತೂರಿನ ಉಕ್ಕಡಂ ಫೋರ್ಟ್ ದೇವಸ್ಥಾನದ ಮುಂಭಾಗದಲ್ಲಿ ಅಕ್ಟೋಬರ್ 23 ರಂದು ಮುಂಜಾನೆ ಮಾರುತಿ ಕಾರೊಂದು ಸ್ಫೋಟಗೊಂಡು ಉಕ್ಕಡಂ ಜಿಎಂ ನಿವಾಸಿ ಮುಬಿನ್ ಸಜೀವ ದಹನಗೊಂಡಿದ್ದರು. ಘಟನೆ ಸಂಬಂಧ ಉಕ್ಕಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಅಲ್ಲದೇ, ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಾರು ಎರಡು ತುಂಡಾಗಿದ್ದು, ಆ ಜಾಗದಲ್ಲಿ ಸಾಕಷ್ಟು ಮೊಳೆ, ಗುಂಡುಗಳಿರುವುದು ಪತ್ತೆಯಾಗಿತ್ತು. ಇದಾದ ಬಳಿಕ ಮುಬಿನ್ ಎಂಬುವರ ಮನೆಯಲ್ಲಿ ಪೊಲೀಸ್ ಇಲಾಖೆ ತಪಾಸಣೆ ನಡೆಸಿದಾಗ ಸುಮಾರು 75 ಕೆಜಿ ಸ್ಫೋಟಕಗಳು, ಕೆಲವು ಅನುಮಾನಾಸ್ಪದ ದಾಖಲೆಗಳು ಮತ್ತು ಐಸಿಸ್‌ಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ : ಕೊಯಮತ್ತೂರು ಸ್ಫೋಟ: ಎನ್‌ಐಎ, ತಮಿಳುನಾಡು ಪೊಲೀಸರ ಶೋಧಕಾರ್ಯ ಮುಂದುವರಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಉಕ್ಕಡಂ ಪ್ರದೇಶದ ಮೊಹಮ್ಮದ್ ತಲ್ಹಾ, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ರಿಯಾಜ್, ಪೆರೋಜ್ ಇಸ್ಮಾಯಿಲ್, ಮೊಹಮ್ಮದ್ ನವಾಜ್ ಇಸ್ಮಾಯಿಲ್, ಅಪ್ಸರ್ ಖಾನ್ ಅವರನ್ನು ಸಹ ಪೊಲೀಸ್ ಇಲಾಖೆ ಬಂಧಿಸಿತ್ತು. ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಡೆಸಿದ ತನಿಖೆ ಪೂರ್ಣಗೊಂಡಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಅಲ್ಲದೇ, ಎನ್‌ಐಎ ಅಧಿಕಾರಿಗಳಿಗೆ ಸಹಾಯ ಮಾಡಲು ಇಬ್ಬರು ಇನ್ಸ್ಪೆಕ್ಟರ್ಗಳು ಮತ್ತು 4 ಸಹಾಯಕ ಇನ್ಸ್‌ಪೆಕ್ಟರ್‌ಗಳನ್ನು ನೇಮಿಸಲಾಗಿದೆ.
ಇದನ್ನೂ ಓದಿ : ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣ: ಚೆನ್ನೈನ ನಾಲ್ಕು ಕಡೆ ಪೊಲೀಸರಿಂದ ದಿಢೀರ್ ದಾಳಿ