ಪುಣೆ(ಮಹಾರಾಷ್ಟ್ರ): 'ರಾಷ್ಟ್ರೀಯ ವೈದ್ಯರ ದಿನ'ವೇ ಯುವ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಇವರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾಗಿರುವರನ್ನು 26 ವರ್ಷದ ಅಂಕಿತಾ ಹಾಗೂ ಆಕೆಯ ಪತಿ ನಿಖಿಲ್(28) ಶೆಂಡ್ಕರ್ ಎಂದು ಗುರುತಿಸಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿದ್ದು, ಅದು ತಾರಕ್ಕೇರಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆಂದು ತಿಳಿದು ಬಂದಿದೆ. ಆರಂಭದಲ್ಲಿ ಅಂಕಿತಾ ನೇಣಿಗೆ ಶರಣಾಗಿದ್ದು, ಇದರ ಬೆನ್ನಲ್ಲೇ ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿರಿ: ಬರ್ತ್‌ಡೇ ಪಾರ್ಟಿಗೆ ಕರೆಯಿಸಿಕೊಂಡು ಯುವತಿ ಮೇಲೆ ಅತ್ಯಾಚಾರ
ಕಳೆದೊಂದು ತಿಂಗಳ ಹಿಂದೆ ಈ ವೈದ್ಯ ಜೋಡಿ ಮದುವೆ ಮಾಡಿಕೊಂಡಿತ್ತು. ಇಬ್ಬರು ವನ್ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಇಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದರು. ಬುಧವಾರ ಕೆಲಸ ಮುಗಿಸಿ ಮನೆಗೆ ಬಂದ ನಿಖಿಲ್ ಫೋನ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ಯುದ್ಧ ಉಂಟಾಗಿದೆ. ಇದರಿಂದ ಕೋಪಗೊಂಡ ಅಂಕಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನಿಖಿಲ್ ಕೂಡ ಅದೇ ಹಾದಿ ತುಳಿದಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ತದನಂತರ ಅಂತ್ಯಕ್ರಿಯೆಗೋಸ್ಕರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಮನಸ್ತಾಪ ಉಂಟಾಗಿತ್ತಂತೆ. ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.