ಭದ್ರಕ್(ಒಡಿಶಾ): ಸಮರಸ ಜೀವನದ ಆರಂಭವೇ ಮದುವೆ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದುಕೊಂಡಿರುವ ಪವಿತ್ರ ಅಡಿಪಾಯ. ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರ ಕ್ಷಣ. ಆದ್ರೆ, ಒಡಿಶಾದ ಭದ್ರಕ್ ಜಿಲ್ಲೆಯ ಬಸುದೇವಪುರ ಪೊಲೀಸ್ ವ್ಯಾಪ್ತಿಯ ಕಾಸಿಯಾ ಪ್ರದೇಶದಲ್ಲಿ ನವವಿವಾಹಿತ ವಧು ಪುರುಷ ಅಂತಾ ಗೊತ್ತಾದ ವಿಲಕ್ಷಣ ಘಟನೆಯೊಂದು ನಡೆದಿದೆ.
ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅಲೋಕ್ ಕುಮಾರ್ ಮಿಸ್ತ್ರಿ ಎಂಬುವರು ಕೇಂದ್ರಪಾಡ ಜಿಲ್ಲೆಯ ಜಂಬೂ ಮೆರೈನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಗರ ಗ್ರಾಮದ ಬಿಸ್ವನಾಥ್ ಮಂಡಲ್ ಅವರ ಪುತ್ರಿ ಮೇಘನಾ ಮಂಡಲ್ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಕೇವಲ 15 ದಿನಗಳಲ್ಲಿ ಫೇಸ್ಬುಕ್ನಲ್ಲಿ ಅರಳಿದ ಇವರಿಬ್ಬರ ಸ್ನೇಹ ಕೊನೆಗೆ ಪ್ರೀತಿಯಾಗಿ ಬದಲಾಯಿತು.
ಮೇ 24ರಂದು ಮೇಘನಾ ಅವರನ್ನು ಭೇಟಿಯಾಗಲು ಅಲೋಕ್ ಕುಮಾರ್ ಜಾಜ್‌ಪುರ ಜಿಲ್ಲೆಯ ಚಂಡಿಖೋಲ್‌ಗೆ ಬಂದಿದ್ದರು. ಬಳಿಕ ಯುವಕ ಆಕೆಯನ್ನ ಬಸುದೇವಪುರದ ಕಾಸಿಯಾದಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದಾನೆ. ಮನೆಯವರು ಸಹ ಇವರ ಪ್ರೀತಿಯನ್ನ ಒಪ್ಪಿಕೊಂಡು ಸರಳವಾಗಿ ಮದುವೆ ಮಾಡಿ, ಸಂಜೆ ಆರತಕ್ಷತೆ ಕೂಟವನ್ನೂ ಏರ್ಪಡಿಸಿದ್ದರು.
ಆರತಕ್ಷತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರೊಬ್ಬರು ವಧುವನ್ನು ಮೇಘನಾ ಎಂದು ಕರೆಯುವ ಬದಲು ‘ಮೇಘನಾದ್’ ಎಂದು ಪುರುಷನ ಹೆಸರಿಟ್ಟು ಕರೆದಿದ್ದಾರೆ. ಅಷ್ಟೇ ಅಲ್ಲದೇ, ಅತಿಥಿಯು ಮೇಘನಾದ್ ತನ್ನ ದೂರದ ಸೋದರಳಿಯ ಎಂದು ಹೇಳಿಕೊಂಡಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಅಲೋಕ್ ಮತ್ತು ಅವರ ಚಿಕ್ಕಪ್ಪನ ಕುಟುಂಬ ಹಾಗೂ ಸ್ಥಳೀಯರು ವಧುವನ್ನು ಥಳಿಸಿ ವಿವಸ್ತ್ರಗೊಳಿಸಿದಾಗ ಸತ್ಯ ಹೊರಬಿದ್ದಿದೆ.
ವಧು ಪುರುಷ ಅಂತಾ ತಿಳಿದ ಕೂಡಲೇ ಕೋಪಗೊಂಡ ಗ್ರಾಮಸ್ಥರು, ಆತನ ಉದ್ದನೆಯ ಕೂದಲನ್ನು ಕತ್ತರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮೇಘನಾದ್‌ನನ್ನು ರಕ್ಷಿಸಿ ಆತನ ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: 12 ದಿನದೊಳಗೆ ಮೂವರು ನಟಿಯರು ಅನುಮಾನಾಸ್ಪದ ಸಾವು.. ಟಾಲಿವುಡ್ ಚಿತ್ರರಂಗಕ್ಕೆ ಆಘಾತ!