ಜನಗಾಮ (ತೆಲಂಗಾಣ) : ವೈದ್ಯರ ಅನುಪಸ್ಥಿತಿಯಲ್ಲಿ ನರ್ಸ್ ಒಬ್ಬರು ಮಹಿಳೆಗೆ ಸಿಸೇರಿಯನ್ ಮಾಡಿದ ಪರಿಣಾಮ ಮಗು ಸಾವನ್ನಪ್ಪಿರುವುದಾಗಿ ಮಹಿಳೆಯ ಕುಟುಂಬಸ್ಥರು ಆರೋಪಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ನರ್ಸ್ ನೇತೃತ್ವದಲ್ಲಿ ಹೆರಿಗೆ ನಡೆಸಿದ ಪರಿಣಾಮ ಮಗು ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿದೆ.
ಬುಧವಾರ ಹೆರಿಗೆ ನೋವಿನ ಹಿನ್ನೆಲೆ ದರ್ದೆಪಲ್ಲಿ ಗ್ರಾಮದ ಮಹಿಳೆಯೊಬ್ಬರನ್ನು ಜನಗಾಮ ಜಿಲ್ಲೆಯ ಪಾಲಕುರ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಮಹಿಳೆಗೆ ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ಹೇಳಿದ್ದರು. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದರು.
ಬುಧವಾರ ಮಧ್ಯರಾತ್ರಿ ವೇಳೆ ಇದ್ದಕ್ಕಿದ್ದಂತೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದೆ. ತಕ್ಷಣ ಮಹಿಳೆಯನ್ನು ಚಿಕಿತ್ಸೆಗೆಂದು ಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಈ ಸಂದರ್ಭದಲ್ಲಿ ಮಹಿಳೆಗೆ ಹೆರಿಗೆ ಮಾಡಬೇಕಾದ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ತಿಳಿಸಿದ್ದಾರೆ. ಕರ್ತವ್ಯದಲ್ಲಿ ಇರಬೇಕಾದ ಡಾ. ಸ್ವಪ್ನ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಮಹಿಳೆಗೆ ಚಿಕಿತ್ಸೆ ನೀಡಲು ವೈದ್ಯರು ಇಲ್ಲದ ಕಾರಣ ನರ್ಸ್ ಸ್ವತಃ ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ಮಹಿಳೆಗೆ ಸಿಸೇರಿಯನ್ ಮಾಡಿದ್ದಾರೆ. ಇದರಿಂದ ಮಗು ಸಾವನ್ನಪ್ಪಿರುವುದಾಗಿ ಮಹಿಳೆಯ ಕುಟುಂಬಸ್ಥರು ದೂರಿದ್ದಾರೆ. ಬಳಿಕ ಮಗುವನ್ನು ಜನಗಾಮ ಆಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಸಂಬಂಧ ಮಹಿಳೆಯ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪಾಲಕುರ್ತಿ ಆಸ್ಪತ್ರೆ ಎದುರು ಧರಣಿ ನಡೆಸಿದರು. ಈ ವೇಳೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆ ಅಧೀಕ್ಷಕ ಲಿಂಗಮೂರ್ತಿ ಹಾಗೂ ವೈದ್ಯ ವಿಧಾನ ಪರಿಷತ್‌ನ ಮೇಲ್ವಿಚಾರಕ ಸುಗುಣಾಕರ ರಾಜು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ತಪ್ಪು ಮಾಡಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ : Murder Mystery: 25 ದಿನ ಕಳೆದರೂ ಪತ್ತೆಯಾಗದ ಬಿಜೆಪಿ ನಾಯಕಿ ಸನಾ ಖಾನ್ ಶವ - ಮೊಬೈಲ್.. ಗೂಗಲ್ ಮೊರೆ ಹೋದ ಪೊಲೀಸರು