ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಭವ್ಯ ಸಂಸತ್ ಭವನವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸರ್ವ ಧರ್ಮಗಳ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ, ಕೇಂದ್ರ ಸಚಿವ ಹೆಚ್.ಎಸ್.ಪುರಿ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಮತ್ತು ವಿವಿಧ ಧಾರ್ಮಿಕ ಮುಖಂಡರು ಸೇರಿದಂತೆ ಕೇಂದ್ರ ಸಚಿವರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.
ಸರ್ವಧರ್ಮ ಪ್ರಾರ್ಥನೆಯಲ್ಲಿ ಧಾರ್ಮಿಕ ಮುಖಂಡರು ವಿವಿಧ ಭಾಷೆಗಳಲ್ಲಿ ಪ್ರಾರ್ಥಿಸಿದರು. ವೈದಿಕ ವಿಧಿವಿಧಾನಗಳೊಂದಿಗೆ ನಡೆದ ಸಾಂಪ್ರದಾಯಿಕ ಪೂಜೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಒಂದು ಗಂಟೆ ಈ ಕಾರ್ಯಕ್ರಮ ಮುಂದುವರಿಯಿತು. ನೂತನ ಸಂಸತ್ ಭವನದ ಉದ್ಘಾಟನೆಗೆ ಮೊದಲು ಪ್ರಧಾನಿ ಮೋದಿ ಗಣಪತಿ ಹೋಮದಲ್ಲಿ ಪಾಲ್ಗೊಂಡರು.
ಎರಡು ಹಂತಗಳಲ್ಲಿ ಸಂಸತ್ ಭವನದ ಉದ್ಘಾಟನೆ ನಡೆಯುತ್ತಿದೆ. ಮೊದಲು ಗಾಂಧಿ ಪ್ರತಿಮೆ ಬಳಿಯ ಮೇಲಾವರಣದಲ್ಲಿ ಪೂಜೆ ನೆರವೇರಿತು. ಬಳಿಕ ಹೊಸ ಕಟ್ಟಡದಲ್ಲಿ ಲೋಕಸಭಾ ಸ್ಪೀಕರ್ ಕುರ್ಚಿಯ ಬಳಿ ಐತಿಹಾಸಿಕ ಸೆಂಗೋಲ್ ರಾಜದಂಡವನ್ನು ಪ್ರಧಾನಿ ಮೋದಿ ಸ್ಥಾಪಿಸಿದರು. ಓಂ ಬಿರ್ಲಾ, ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್.ಜೈಶಂಕರ್ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತರಿದ್ದರು.
ಹೊಸ ಸಂಸತ್ ಕಟ್ಟಡದಲ್ಲಿ ಸ್ಥಾಪಿಸುವ ಸಂಗೋಲ್ ಅನ್ನು ಪ್ರಧಾನಿ ಮೋದಿಯವರಿಗೆ ಅಧೀನಮ್‌ನವರು ಹಸ್ತಾಂತರಿಸಿದರು. ಸೆಂಗೋಲ್ ಮುಂದೆ ಪ್ರಧಾನಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ಪ್ರಧಾನಿ ತಮಿಳುನಾಡಿನ ವಿವಿಧ ದೇವಾಲಯಗಳಿಂದ ಆಗಮಿಸಿದ್ದ ಅಧೀನಮ್‌ರಿಂದ (ಪುರೋಹಿತರು) ಆಶೀರ್ವಾದ ಪಡೆದರು. ಐತಿಹಾಸಿಕ ಹಿನ್ನೆಲೆಯ ಸೆಂಗೋಲ್ ಅನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆಗಸ್ಟ್ 14 ರ ರಾತ್ರಿ ತಮ್ಮ ನಿವಾಸದಲ್ಲಿ ಹಲವಾರು ನಾಯಕರ ಸಮ್ಮುಖದಲ್ಲಿ ಸ್ವೀಕರಿಸಿದ್ದರು.
ಹೊಸ ಸಂಸತ್ ಕಟ್ಟಡವು ಲೋಕಸಭೆಯಲ್ಲಿ 888 ಸದಸ್ಯರು ಕುಳಿತುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಸಂಸತ್ತಿನ ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಲು ಅವಕಾಶವಿತ್ತು. ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಕಟ್ಟಡದ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಸದಸ್ಯರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ, ಸ್ಪೀಕರ್ ಪೀಠದ ಬಳಿ ಸೆಂಗೋಲ್ ಪ್ರತಿಷ್ಠಾಪನೆ