ನವದೆಹಲಿ : ಜಿ 20 ನಾಯಕರು ಅಂಗೀಕರಿಸಿದ ನವದೆಹಲಿ ಘೋಷಣೆಗಾಗಿ ನಡೆದ ಮಾತುಕತೆಗಳ ಮಧ್ಯೆ ತೊಡಕುಗಳು ಬಂದರೂ, ಘೋಷಣೆಯು ನಮ್ಮ ಚರ್ಚೆಗಳಿಗೆ ಅನುಗುಣವಾಗಿತ್ತು ಎಂದು ಮಾತುಕತೆಗಳ ಬಗ್ಗೆ ಮಾಹಿತಿ ಇರುವ ಯುರೋಪಿಯನ್ ಯೂನಿಯನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘೋಷಣೆಯಲ್ಲಿನ ಪಠ್ಯದ ಬಗ್ಗೆ ಇಯು ತೃಪ್ತವಾಗಿದೆ ಎಂದು ಅಧಿಕಾರಿ ಹೇಳಿದರು. ಈ ನಿಟ್ಟಿನಲ್ಲಿ ಭಾರತೀಯ ನಾಯಕತ್ವವು ಅದ್ಭುತವಾಗಿ ಕೆಲಸ ಮಾಡಿದೆ ಎಂದ ಅವರು, ನವದೆಹಲಿ ಘೋಷಣೆಯು ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸಲು ಮೊದಲ ಮೆಟ್ಟಿಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಕ್ರೇನ್ನಲ್ಲಿ ನ್ಯಾಯಸಮ್ಮತವಾದ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಿ 20 ದೇಶಗಳು ಒಗ್ಗಟ್ಟಾಗಿವೆ ಎಂದು ಹೇಳುವ ನವದೆಹಲಿ ಘೋಷಣೆಯ ದಾಖಲೆಯು ಭವಿಷ್ಯದಲ್ಲಿ ಮುಂದೆ ಸಾಗಲು ಸಹಾಯ ಮಾಡಲಿದೆ ಎಂದು ಅಧಿಕಾರಿ ಹೇಳಿದರು.
ಶನಿವಾರ ಅಂಗೀಕರಿಸಲಾದ ನವದೆಹಲಿ ಘೋಷಣೆಯು ಹೀಗಿದೆ- "ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧದ ಪ್ರತಿಕೂಲ ಪರಿಣಾಮವನ್ನು ಪರಿಹರಿಸುವ ನಮ್ಮ ಪ್ರಯತ್ನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಉಕ್ರೇನ್ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಬೆಂಬಲಿಸುವ ಎಲ್ಲ ರಚನಾತ್ಮಕ ಉಪಕ್ರಮಗಳನ್ನು ಸ್ವಾಗತಿಸುತ್ತೇವೆ. ಅದು ಶಾಂತಿಯನ್ನು ಉತ್ತೇಜಿಸಲು ಯುಎನ್ ಚಾರ್ಟರ್ನ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಮನೋಭಾವದಲ್ಲಿ ರಾಷ್ಟ್ರಗಳ ನಡುವೆ ಸ್ನೇಹಪರ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳು, ಎಲ್ಲಾ ಉದ್ದೇಶಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತದೆ."
ಜಾಗತಿಕ ಆಹಾರ ಬಿಕ್ಕಟ್ಟಿನ ನಿವಾರಣೆಗೆ ಸಹಾಯ ಮಾಡಲು, ಈಗ ನಡೆಯುತ್ತಿರುವ ಯುದ್ಧದ ಹೊರತಾಗಿಯೂ ಒಂದು ವರ್ಷದ ಹಿಂದೆ ಉಕ್ರೇನ್ ತನ್ನ ಕಪ್ಪು ಸಮುದ್ರದ ಬಂದರುಗಳಿಂದ ಧಾನ್ಯವನ್ನು ರಫ್ತು ಮಾಡಲು ಅನುಮತಿಸಿದ್ದ ಧಾನ್ಯ ಒಪ್ಪಂದವನ್ನು ಮಾಸ್ಕೋ ಇತ್ತೀಚೆಗೆ ಕೊನೆಗೊಳಿಸಿದೆ. ಮಹತ್ವಾಕಾಂಕ್ಷೆಯ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಬಗ್ಗೆಯೂ ಇಯು ಅಧಿಕಾರಿ ಪರಿಶೀಲಿಸಿದರು. ಈ ಒಪ್ಪಂದದ ಮೇಲಿನ ಕೆಲಸವು ಕೆಲ ಕಾಲದಿಂದ ನಡೆಯುತ್ತಿದೆ. ಯುರೋಪ್ ಅನ್ನು ಏಷ್ಯಾದೊಂದಿಗೆ ಸಂಪರ್ಕಿಸುವ ಕಾರಿಡಾರ್ ಐತಿಹಾಸಿಕ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಕೊರೊನಾ ಸಾಂಕ್ರಾಮಿಕ ರೋಗದ ನಂತರದ ವಿಶ್ವ ಕ್ರಮದಲ್ಲಿ ಸಂಪೂರ್ಣವಾಗಿ ವಿಕಸನಗೊಂಡ ಪರ್ಯಾಯ ಪೂರೈಕೆ ಸರಪಳಿಯಾಗಿ ಈ ಉಪಕ್ರಮವನ್ನು ನೋಡಬಹುದು. ಆಗ್ನೇಯ ಏಷ್ಯಾದಿಂದ ಗಲ್ಫ್, ಪಶ್ಚಿಮ ಏಷ್ಯಾ ಮತ್ತು ಯುರೋಪ್ಗೆ ವ್ಯಾಪಾರ ಹರಿವಿನ ಮಾರ್ಗದಲ್ಲಿ ಭಾರತವು ಸ್ಥಿರವಾಗಿರುವುದರಿಂದ ದೇಶವು ಗಮನಾರ್ಹವಾಗಿ ಲಾಭ ಪಡೆಯುವ ನಿರೀಕ್ಷೆಯಿದೆ. ಇದು ಭಾರತಕ್ಕೆ ಗಮನಾರ್ಹ ಕಾರ್ಯತಂತ್ರ ಮತ್ತು ಆರ್ಥಿಕ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕ್ಷೇತ್ರದಲ್ಲಿ ಭಾರಿ ಅವಕಾಶಗಳನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ : ರಷ್ಯಾ ಹಡಗು ಮುಳುಗಿಸಲು ಸ್ಪೇಸ್ ಎಕ್ಸ್ನ ನೆರವು ಕೇಳಿತ್ತಾ ಉಕ್ರೇನ್? ಮಸ್ಕ್ ಹೇಳಿದ್ದು ಹೀಗೆ..