ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಲು ಸಿದ್ಧವಾಗಿದೆ. ಭಾರತದ ಹೃದಯ ಭಾಗದಲ್ಲಿರುವ ಮೂರು ರಾಜ್ಯಗಳಲ್ಲಿ ಒಂದಾದ ಮಧ್ಯಪ್ರದೇಶದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಂಡಿರುವ ಬಿಜೆಪಿ, ಸ್ಪಷ್ಟ ಬಹುಮತ ಸಾಧಿಸಿ ರಾಜಸ್ಥಾನ ಹಾಗೂ ಛತ್ತೀಸ್ಗಢವನ್ನು ಕಾಂಗ್ರೆಸ್ ಕೈಯಿಂದ ಕಸಿದುಕೊಂಡಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದಿಂದ ರೇವಂತ್ ರೆಡ್ಡಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದು, ಮಿಜೋರಾಂ ರಾಜ್ಯದಲ್ಲಿ ಜೆಡ್ಪಿಎಂ ಪಕ್ಷದಿಂದ ನಾಯಕ ಲಾಲ್ದುಹೋಮಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಫಲಿತಾಂಶ ಪ್ರಕಟವಾಗಿ ಐದು ದಿನಗಳಾದರೂ ಬಿಜೆಪಿ ಜಯಭೇರಿ ಬಾರಿಸಿರುವ ಮೂರು ರಾಜ್ಯಗಳಲ್ಲಿ ಇನ್ನೂ ಸಿಎಂ ಯಾರು ಎಂದು ಘೋಷಣೆಯೇ ಆಗಿಲ್ಲ. ಮೂರು ರಾಜ್ಯಗಳಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತದೆ ಎನ್ನುವ ಬಗ್ಗೆ ಇಡೀ ದೇಶದ ಕಣ್ಣು ನೆಟ್ಟಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಸಿಎಂ ಆಯ್ಕೆ ಬಗ್ಗೆ ಬಿಜೆಪಿ ವಿಳಂಬದ ಬಗ್ಗೆ ಪ್ರಶ್ನೆ ಮಾಡುತ್ತಿದೆ.
ಇದೆಲ್ಲವನ್ನೂ ಬದಿಗೊತ್ತಿರುವ ಬಿಜೆಪಿ ಮಾತ್ರ, ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಗೂ ಸದ್ಯ ಪಕ್ಷದ ಉನ್ನತ ನಾಯಕರು ಸಂಸತ್ತು ಅಧಿವೇಶನದಲ್ಲಿ ಬ್ಯುಸಿಯಾಗಿರುವ ಕಾರಣ ಹೊಸ ಸಿಎಂಗಳ ಆಯ್ಕೆಗೆ ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಯಾವುದೇ ವಿವಾದ ಉಂಟಾಗುವುದು ಬೇಡ ಎನ್ನುವ ಆಲೋಚನೆಯಿಂದಲೂ, ಅಳೆದು ತೂಗಿ ಸಿಎಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಸರಿ ಪಕ್ಷ ನಿರ್ಧರಿಸಿದೆ.
ಸಿಎಂ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರ ನೇಮಕ: ಮಾಸ್ಟರ್ ಪ್ಲ್ಯಾನ್ ಮಾಡಿರುವ ಬಿಜೆಪಿ ಇದೀಗ ಮೂರು ರಾಜ್ಯಗಳಿಗೆ ನೂತನ ಮುಖ್ಯಮಂತ್ರಿ ಅಭ್ಯರ್ಥಿಗಳ ಆಯ್ಕೆಗಾಗಿ, ಆಯಾ ರಾಜ್ಯಗಳಲ್ಲಿ ತನ್ನ ಶಾಸಕಾಂಗ ಪಕ್ಷಗಳ ಸಭೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ವೀಕ್ಷಕರನ್ನು ನೇಮಕ ಮಾಡಿದೆ. ಹಾಗಾಗಿ ಬಿಜೆಪಿ ಶಾಸಕಾಂಗ ಪಕ್ಷಗಳ ನಾಯಕರನ್ನು ಆಯ್ಕೆ ಮಾಡಿದ ನಂತರವಷ್ಟೇ ಮೂರು ರಾಜ್ಯಗಳಲ್ಲಿ ಸಿಎಂಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ಉನ್ನತ ನಾಯಕರಲ್ಲಿ ತೀವ್ರ ಆಲೋಚನೆ ಮುಂದುವರಿದಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸಿಎಂಗಳು ವಹಿಸಬೇಕಾದ ಮಹತ್ವದ ಮಾತ್ರಗಳನ್ನು ಗಮನದಲ್ಲಿಟ್ಟುಕೊಂಡು, ಹೊಸ ಸಿಎಂ ಅಭ್ಯರ್ಥಿಗಳು ಹೆಸರುಗಳನ್ನು ಅಂತಿಮಗೊಳಿಸಲು ಬಿಜೆಪಿ ಸಮಯ ತೆಗೆದುಕೊಳ್ಳುತ್ತಿದೆ.
ನಡ್ಡಾರನ್ನು ಭೇಟಿಯಾದ ವಸುಂಧರಾ ರಾಜೆ: ಈ ನಡುವೆ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಇನ್ನೊಂದೆಡೆ ಮಹತ್ ಬಾಲಕನಾಥ್, ದಿಯಾ ಕುಮಾರಿ ಹಾಗೂ ರಾಜ್ಯವರ್ಧನ್ ಸಿಂಗ್ ರಾಠೋಡ್ ಸಿಎಂ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 25ರಂದು ರಾಜಸ್ಥಾನಕ್ಕೆ ನಡೆದ ಒಂದೇ ಹಂತದ ಚುನಾವಣೆಯಲ್ಲಿ ಬಿಜೆಪಿ 199 ಸ್ಥಾನಗಳನ್ನು ಗೆದ್ದು, 115 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್ ಕೈಯಿಂದ ರಾಜಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಅದಲ್ಲದೇ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿದ್ದು, ಉಭಯ ನಾಯಕರ ಮಧ್ಯೆ ನಡೆದಿರುವ ಮಾತುಕತೆಯ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಚಳಿಗಾಲದ ಸಂಸತ್ತು ಅಧಿವೇಶನ ನಡೆಯುತ್ತಿರುವ ಕಾರಣ ಸಿಎಂ ಆಯ್ಕೆಗೆ ಬಿಜೆಪಿ ಇನ್ನೂ ಕೆಲವು ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ಪಕ್ಷದ ಕೆಲ ಮೂಲಗಳು ಹೇಳಿವೆ. ಇನ್ನೊಂದೆಡೆ ಎರಡು ಅಥವಾ ಮೂರು ದಿನಗಳಲ್ಲಿ ಮೂರೂ ರಾಜ್ಯಗಳ ಸಿಎಂ ಅಭ್ಯರ್ಥಿಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಲಾಲ್ದುಹೋಮಾ