ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾನೂನುಗಳು ರೈತರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಇತರ ಜನರ ಹಕ್ಕುಗಳ ಕುರಿತು ಭಾರತ ಸಹಿ ಮಾಡಿರುವ ವಿಶ್ವಸಂಸ್ಥೆಯ ಘೋಷಣೆ ಉಲ್ಲಂಘಿಸುತ್ತವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೇಳಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 46ನೇ ಅಧಿವೇಶನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಎಸ್‌ಕೆಎಂ ಮುಖಂಡ ದರ್ಶನ್ ಪಾಲ್ ಈ ವಿಚಾರವನ್ನು ಯುಎನ್‌ಹೆಚ್‌ಆರ್‌ಸಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ತಾಜ್ ಮಹಲ್ ವೀಕ್ಷಣೆ: ಟಿಕೆಟ್ ದರ ಹೆಚ್ಚಿಸಲು ಆಗ್ರಾ ಆಡಳಿತದ ನಿರ್ಧಾರ
ಸೋಮವಾರ ದೆಹಲಿ ಗಡಿಯಲ್ಲಿ ನಡೆದ 110ನೇ ದಿನದ ರೈತ ಚಳವಳಿ ಗುರುತಿಸಲು ಈ ದಿನವನ್ನು 'ಖಾಸಗೀಕರಣ ವಿರೋಧಿ ದಿನ' ಹಾಗೂ 'ಬಂಡವಾಳಶಾಹಿತ್ವ ವಿರೋಧಿ ದಿನ'ವನ್ನಾಗಿ ಆಚರಿಸಲಾಯಿತು ಎಂಬ ಮಾಹಿತಿ ಇರುವ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಲು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಎಸ್‌ಕೆಎಂ ತಿಳಿಸಿದೆ.
ಈ ಪತ್ರದಲ್ಲಿ, ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮತ್ತು ಭಾರತೀಯ ಕೃಷಿಯನ್ನು ಬಂಡವಾಳಶಾಹಿಗಳ ಕೈಗೆ ನೀಡುವ ಸರ್ಕಾರದ ಧೋರಣೆ ನಿಲ್ಲಿಸಬೇಕು. ಗಗನಕ್ಕೇರಿರುವ ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ತಕ್ಷಣವೇ ಕಡಿಮೆಗೊಳಿಸಬೇಕು ಎಂದು ಕೂಡ ಒತ್ತಾಯಿಸಲಾಗಿದೆ.