ಗುವಾಹಟಿ(ಅಸ್ಸೋಂ): ಮಾನವರು ಮತ್ತು ಕಾಡು ಆನೆಗಳ ನಡುವಿನ ಸಂಘರ್ಷ ಹೊಸ ವಿಷಯವಲ್ಲ. ಅರಣ್ಯ ಪ್ರದೇಶ ಮತ್ತು ಆಹಾರದ ಕೊರತೆಯಿಂದ ಅಸ್ಸೋಂನಲ್ಲಿ ಮಾನವ - ಆನೆ ಸಂಘರ್ಷ ವಿಪರೀತವಾಗಿದೆ. ಆದರೆ, ಈ ಸಂಘರ್ಷ ಕಡಿಮೆ ಮಾಡಲು, ಅಸ್ಸೋಂನ ನಾಗಾನ್ ಜಿಲ್ಲೆಯ ವನ್ಯಜೀವಿ ಪ್ರೇಮಿ ಮತ್ತು ಸಂರಕ್ಷಣಾವಾದಿ ಬಿನೋದ್ ದುಲು ಬೋರಾ ಮತ್ತು ಅವರ ಪತ್ನಿ ಮೇಘನಾ ಮಯೂರಿ ಹಜಾರಿಕಾ ಮುಂದಾಗಿದ್ದಾರೆ.
ಕಾಡು ಆನೆಗಳ ಹಿಂಡುಗಳು ಆಹಾರಕ್ಕಾಗಿ ಮಾನವ ವಾಸ ಸ್ಥಳಗಳ ಮೇಲೆ ದಾಳಿ ಮಾಡದಂತೆ ಭತ್ತ ಮತ್ತು ಮರಗಳನ್ನು ನೆಡುವ ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ಬೋರಾಸ್ ಗ್ರಾಮದ ನಿವಾಸಿಗಳ ಸಹಾಯದಿಂದ ಹಾತಿ ಬಂಧು ಎಂಬ ಸಂಘಟನೆ ರಚಿಸಿದ್ದಾರೆ. ಈ ಸಂಘಟನೆ 2018 ರಿಂದ ಆ ಪ್ರದೇಶದಲ್ಲಿ ಸಸ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರಿಂದಾಗಿ ಮಾನವ ವಸಾಹತುಗಳ ಸುತ್ತ ಆನೆಗಳ ಹಾವಳಿ ಕಡಿಮೆಯಾಗಿದೆಯಂತೆ.
ಅಸ್ಸೋಂನ ಅರಣ್ಯ ಇಲಾಖೆ ಸಹ ಹಾತಿ ಬಂಧುಗೆ ಸಹಕಾರ ನೀಡಿದೆ. ಈ ಹೊಸ ಕ್ರಮದಿಂದ ಆಹಾರ ಹುಡುಕಾಟದಲ್ಲಿ ಆನೆ ಹಿಂಡುಗಳು ಮಾನವ ವಾಸಸ್ಥಾನಗಳಿಗೆ ಬರುವ ಘಟನೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಕಡಿಮೆಯಾಗಿವೆ. ಸಂಘಟನೆ ರೂಪಿಸುವಲ್ಲಿ ಮತ್ತು ಮಿಷನ್ ಅನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುವಲ್ಲಿ ಹಿರಿಯ ನಾಗರಿಕ ಪ್ರದೀಪ್ ಭುಯಾನ್ ಅವರ ಪಾತ್ರ ಅತಿ ಮುಖ್ಯವಾಗಿದೆ.
ಬಿನೋದ್ ದುಲು ಬೋರಾ ಅವರ ಉಪಕ್ರಮದಲ್ಲಿ ಅವರ ಪತ್ನಿ ಮೇಘನಾ ಮಯೂರಿ ಹಜಾರಿಕಾ ಬೆಂಬಲ ನೀಡಿದರು. ದಂಪತಿಗಳು ಮರದ ಮೇಲಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮೂಲಕ ಇವರ ಪ್ರಯತ್ನಗಳಿಗೆ ಫಲ ಸಿಕ್ಕಿದೆ. ಆನೆಗಳ ಹಿಂಡುಗಳು ರಾತ್ರಿಯಲ್ಲಿ ನೆಟ್ಟ ಭತ್ತ ಮತ್ತು ಹುಲ್ಲು ಕೃಷಿಗೆ ಇಳಿದು ಬೆಳಗ್ಗೆ ಕಾಡಿಗೆ ಮರಳುತ್ತಿವೆ.
ಬಿನೋದ್ ದುಲು ಬೋರಾ ಮತ್ತು ಹಾತಿ ಬಂಧು ಸಂಘಟನೆ ಉಪಕ್ರಮದ ನಂತರ ಈ ಪ್ರದೇಶದಲ್ಲಿ ಮಾನವ - ಆನೆಗಳ ಘರ್ಷಣೆಗಳು ಕಡಿಮೆಯಾಗಿವೆ. ಆನೆಗಳು ಅವುಗಳಿಗಾಗಿಯೇ ಬೆಳದೆ ಭತ್ತ ಮತ್ತು ಹುಲ್ಲು ತಿಂದು ಪುನಃ ಕಾಡಿಗೆ ಮರಳುತ್ತವೆ. ಹಾತಿ ಬಂಧು ಸಂಘಟನೆಯ ಈ ಉಪಕ್ರಮ ದೇಶದ ಇತರ ಭಾಗಗಳಲ್ಲಿಯೂ ಅನುಸರಿಸಿದರೆ ಮಾನವ - ಆನೆಗಳ ಸಂಘರ್ಷ ಕಡಿಮೆ ಮಾಡಬಹುದಾಗಿದೆ.