ಹರಿಯಾಣ: ಒಂದು ಹೆಣ್ಣು ಯಾವ ಹುಡುಗನನ್ನು ವರಿಸಬೇಕೆಂದು ಸ್ವರ್ಗದಲ್ಲಿ ದೇವರು ಮೊದಲೇ ನಿಶ್ಚಯಿರುತ್ತಾನೆ ಎಂಬ ಮಾತಿದೆ. ಮದುವೆ ಅಂದ್ರೆ ಕೌಟುಂಬಿಕ ಸಮಾರಂಭ. ನೆಂಟರು, ಸ್ನೇಹಿತರು, ಆಪ್ತರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ವಿವಿಧ ಬಗೆಯ ಭಕ್ಷ್ಯಗಳ ಭೋಜನ, ಹೊಸ ಒಡವೆ, ವಸ್ತ್ರ ತೊಟ್ಟು ಬಂಧು-ಬಾಂಧವರೊಂದಿಗೆ ಸಂಭ್ರಮಿಸುವುಕ್ಕೆ ಮದುವೆ ಸೂಕ್ತ ವೇದಿಕೆ ಕೂಡ ಹೌದು. ಆದರೆ ಇಲ್ಲೊಂದು ವಿಭಿನ್ನ ವಿವಾಹ ಕಾರ್ಯಕ್ರಮ ನಡೆದಿದೆ.
ಹರಿಯಾಣ ಗುರುಗ್ರಾಮ್‌ನ ಪಾಲಂ ವಿಹಾರ್ ಎಕ್ಸ್‌ಟೆನ್ಶನ್‌ನಲ್ಲಿ ನೆರೆಹೊರೆಯವರು ಸೇರಿಕೊಂಡು ತಮ್ಮ ಮುದ್ದಿನ ಸಾಕುನಾಯಿಗಳಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಶೇರು (ಗಂಡು) ಮತ್ತು ಸ್ವೀಟಿ (ಹೆಣ್ಣು) ಹೆಸರಿನ ಈ ಶ್ವಾನಗಳ ವಿಶಿಷ್ಟ ವಿವಾಹಕ್ಕೆ 100 ಆಮಂತ್ರಣ ಪತ್ರಗಳನ್ನು ಮುದ್ರಿಸಲಾಗಿದೆ. ಇಂದು ರಾತ್ರಿ 8:30 ಕ್ಕೆ ಶೇರು ಮತ್ತು ಸ್ವೀಟಿ ಮದುವೆ ಕಾರ್ಯಕ್ರಮ ನಡೆಸಲಿದ್ದು, ಶನಿವಾರ ಮೆಹೆಂದಿ ಸಮಾರಂಭ ನೆರವೇರಿಸಲಾಯಿತು ಎಂದು ವಿವಾಹ ಆಯೋಜಕರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಪ್ರದೇಶದ ಜನರು ಶ್ವಾನಗಳ ಮದುವೆ ಮಾಡಲು ಭಾರಿ ಉತ್ಸುಕರಾಗಿದ್ದಾರೆ.
ಸ್ವೀಟಿಯನ್ನು ಸಾಕಿದ ಮಾಲೀಕರಾದ ರಾಣಿ ಎಂಬುವರು ಮಾತನಾಡಿ, "ನನಗೆ ಮದುವೆಯ ನಂತರ ಮಕ್ಕಳಾಗಲಿಲ್ಲ. ಈ ಒಂಟಿತನವನ್ನು ಕಡಿಮೆ ಮಾಡಲು ನನ್ನ ಪತಿ 3 ವರ್ಷಗಳ ಹಿಂದೆ ಸ್ವೀಟಿಯನ್ನು ದೇವಸ್ಥಾನದಿಂದ ಕರೆತಂದರು. ಅಂದಿನಿಂದ ನನ್ನ ಮಗುವಿನಂತೆ ಬೆಳೆಸಿದ್ದೇನೆ. ಈ ಮದುವೆಯಿಂದಾಗಿ ನನಗೆ 'ಕನ್ಯಾದಾನ' ಮಾಡುವ ಅವಕಾಶ ಸಿಕ್ಕಿದೆ" ಎಂದು ಹೇಳಿದರು.
ಇದನ್ನೂ ಓದಿ: ಆಸಿಡ್ weds ಜಾನ್ವಿ: ಕೇರಳದಲ್ಲಿ ಹೀಗೊಂದು ಅಪರೂಪದ ವಿವಾಹ
ಶೇರು ಸಾಕಿರುವ ಮನೆಯವರು ಮಾತನಾಡಿ, "ಅವನಿಗೆ 8 ವರ್ಷ, ಚಿಕ್ಕಂದಿನಿಂದಲೂ ನಮ್ಮ ಮಕ್ಕಳೊಂದಿಗೆ ಆಟವಾಡುತ್ತಾ ಬೆಳೆದಿದ್ದಾನೆ. ಶೇರು ಮತ್ತು ಸ್ವೀಟಿ ವಿವಾಹವು ಮನುಷ್ಯರು ಮತ್ತು ನಾಯಿಗಳ ನಡುವೆ ಇರುವ ಪ್ರೀತಿಯ ಸೂಚಕ" ಎಂದು ತಿಳಿಸಿದ್ದಾರೆ.