ಆಲಪ್ಪುಳ (ಕೇರಳ): ಕೇರಳದಲ್ಲಿ ನಾಳೆ 69ನೇ ನೆಹರು ಟ್ರೋಫಿ ಬೋಟ್ ರೇಸ್ ನಡೆಯಲಿದೆ. ಇದಕ್ಕಾಗಿ ಆಲಪ್ಪುಳ ಮತ್ತು ಪುನ್ನಮಾಡ ಕೆರೆ ಸಜ್ಜಾಗಿದ್ದು, ಈ ವರ್ಷ 9 ವಿಭಾಗಗಳಲ್ಲಿ ಒಟ್ಟು 72 ದೋಣಿಗಳು ಪಾಲ್ಗೊಳ್ಳಲಿವೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಪ್ರಮುಖವಾಗಿ ಚುಂಡನ್ ಅಥವಾ ಸ್ನೇಕ್ ದೋಣಿ ವಿಭಾಗದಲ್ಲಿ 19 ದೋಣಿಗಳು ಭಾಗವಹಿಸಲಿವೆ. ಇತರ ವಿಭಾಗಗಳಾದ ಚುರ್ಲನ್-3, ಇರುಟ್ಟುಕುಥಿ ಎ ಗ್ರೇಡ್-4, ಇರುಟ್ಟುಕುಥಿ ಬಿ ಗ್ರೇಡ್-15, ಇರುಟ್ಟುಕುಥಿ ಸಿ ಗ್ರೇಡ್-13, ವೆಪ್ಪು ಎ ಗ್ರೇಡ್-7, ವೆಪ್ಪು ಬಿ ಗ್ರೇಡ್-4, ತೆಕ್ಕನೋಡಿ ಥಾರಾ-3 ಮತ್ತು ತೆಕ್ಕನೋಡಿ ಕೆಟ್ಟು ವಿಭಾಗದಲ್ಲಿ 4 ದೋಣಿಗಳು ಸ್ಪರ್ಧಗೆ ಇಳಿಯಲಿವೆ. ಈ ದೋಣಿ ಸ್ಪರ್ಧೆಗಳಿಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದೆ.
ಕೆರೆ ಸುತ್ತ-ಮುತ್ತ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸ್ಪರ್ಧೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಯ ನಂತರ ಪ್ರವೇಶಿಸುವ ದೋಣಿಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಜೊತೆಗೆ ಬೋಟ್ ರೇಸ್ ನಿಯಮಗಳನ್ನು ಪಾಲಿಸದ ದೋಣಿಗಳು ಮತ್ತು ಪ್ಯಾಡ್ಲರ್ಗಳನ್ನು ಪತ್ತೆಹಚ್ಚಲು ಹಾಗೂ ಇತರ ಉಲ್ಲಂಘನೆಗಳ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸ್ಪರ್ಧೆ ವೀಕ್ಷಿಸಲು ಬರುವವರಿಗೆ ಹೆಚ್ಚಿನ ಬೋಟ್ ಹಾಗೂ ಬಸ್ ವ್ಯವಸ್ಥೆಗಳನ್ನೂ ಮಾಡಲಾಗಿದೆ. ನೆರೆಯ ಜಿಲ್ಲೆಗಳ ಕೆಎಸ್‌ಆರ್‌ಟಿಸಿ ಡಿಪೋಗಳಿಂದ ಆಲಪ್ಪುಳಕ್ಕೆ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ದೋಣಿ ಸ್ಪರ್ಧೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್ ಸಹ ಘೋಷಿಸಿದೆ. ಕೆಎಸ್‌ಆರ್‌ಟಿಸಿ ಬಜೆಟ್ ಸೆಲ್ ಹೆಸರಲ್ಲಿ ವಿಶೇಷ ಪ್ಯಾಕೇಜ್ ಟೂರಿಸಂ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಬೋಟ್ ರೇಸ್ ವೀಕ್ಷಿಸಲು ಪಾಸ್ ಹೊಂದಿರುವವರಿಗೆ ಮಾತ್ರ ಗ್ಯಾಲರಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: ಕಡಲತೀರ ಸ್ವಚ್ಛತೆ ಜೊತೆಗೆ ದೋಣಿ ಸ್ಪರ್ಧೆ: ಗಮನ ಸೆಳೆದ ಕಡಲಮಕ್ಕಳ ಬಲಪ್ರದರ್ಶನ