ಚೆನ್ನೈ (ತಮಿಳುನಾಡು): ಮೊನ್ನೆಯಷ್ಟೇ ನೀಟ್ (ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ) ಬರೆದಿದ್ದ ವಿದ್ಯಾರ್ಥಿನಿಯೋರ್ವಳು ತೇರ್ಗಡೆ ಹೊಂದುತ್ತೇನೋ ಇಲ್ಲವೋ ಎಂಬ ಭಯದಿಂದ ನೇಣಿಗೆ ಶರಣಾಗಿದ್ದಾಳೆ.
ಅರಿಯಾಲೂರು ಜಿಲ್ಲೆ ಚಿತಂಬಡಿ ಗ್ರಾಮದ ಕನಿಮೋಳಿ ಎಂಬ ವಿದ್ಯಾರ್ಥಿನಿ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯಲು ನೀಟ್ ಪರೀಕ್ಷೆ ಬರೆದಿದ್ದಳು. ಈಕೆ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 562 ಅಂಕಗಳನ್ನು ಗಳಿಸಿ, ತಾನು ಕಲಿತ ಕಾಲೇಜಿನಲ್ಲಿ ಅಗ್ರಸ್ಥಾನ ಪಡೆದಿದ್ದಳು. ಹೆಚ್ಚಿನ ನಿರೀಕ್ಷೆಗಳೊಂದಿಗೆ NEETಗೆ ತಯಾರಾಗಿ, ಸೆಪ್ಟೆಂಬರ್ 12ರಂದು ನಡೆದ ಪರೀಕ್ಷೆಯನ್ನು ಎದುರಿಸಿದ್ದಳು.
"ಪರೀಕ್ಷೆ ಕಠಿಣವಾಗಿತ್ತು. ಹೀಗಾಗಿ ಪರೀಕ್ಷೆ ಚೆನ್ನಾಗಿ ಬರೆಯಲು ಸಾಧ್ಯವಾಗಲಿಲ್ಲ ಎಂದು ಕನಿಮೋಳಿ ಆತಂಕ ವಕ್ತಪಡಿಸಿದ್ದಳು. ಫಲಿತಾಂಶ ಚೆನ್ನಾಗೇ ಬರುತ್ತದೆ, ಹೆದರಬೇಡ ಅಂತ ನಾನು ಅವಳನ್ನು ಸಮಾಧಾನ ಪಡಿಸಿದ್ದೆ. ಆದರೂ ವೈದ್ಯೆಯಾಗುವ ಕನಸು ನನಸಾಗುವುದಿಲ್ಲ ಎಂಬ ಕಾರಣಕ್ಕೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ಆಕೆಯ ತಂದೆ ಕರುಣಾನಿಧಿ ಹೇಳಿದ್ದಾರೆ.
ಇದನ್ನೂ ಓದಿ: ನೀಟ್ ಭಯಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ತಮಿಳುನಾಡಿನಲ್ಲಿ NEETನಿಂದ ವಿನಾಯಿತಿ ನೀಡುವ ಮಸೂದೆ ಪಾಸ್
ಸ್ಟಾಲಿನ್ ಸರ್ಕಾರದ ಮಹತ್ವದ ನಿರ್ಧಾರ
ಸೆ.12 ರಂದು ಪರೀಕ್ಷೆ ಬರೆದು ಬಂದ ದಿನವೇ ಸೇಲಂ ಜಿಲ್ಲೆಯ ಧನುಷ್ ಎಂಬಾತ ಕೂಡ ಉತ್ತೀರ್ಣನಾಗುವುದಿಲ್ಲ ಎಂಬ ಭಯದಿಂದ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದನು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ತಮಿಳುನಾಡಿನ ವಿದ್ಯಾರ್ಥಿಗಳು ಎಂಬಿಬಿಎಸ್/ಬಿಡಿಎಸ್ನಂತಹ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆದುಕೊಳ್ಳಬೇಕಾದರೆ 12ನೇ ತರಗತಿ ಅಂಕ ಆಧರಿಸಿ ಪ್ರವೇಶ ಪಡೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸದನದಲ್ಲಿ ಮಸೂದೆ ಮಂಡನೆ ಮಾಡಿದ್ದು, ಬಿಲ್ ಪಾಸ್ ಆಗಿದೆ.