ನವದೆಹಲಿ: ಗುರುವಾರ ರಾತ್ರಿ ಸುಮಾರು 9:10 ಗಂಟೆಗೆ ರಾಜಸ್ಥಾನದ ಬಾರ್ಮರ್‌ನ ರಾತ್ರಿ ಆಕಾಶದಲ್ಲಿ ಮಿಗ್ -21 'ಬೈಸನ್' ದುರಂತಕ್ಕೆ ಈಡಾಗಿದೆ. ಈ ಮೂಲಕ ಇಂತಹುದೇ ಘಟನೆಗಳ ಇತಿಹಾಸದ ದುರಂತದ ತುಣುಕನ್ನು ಮತ್ತೊಮ್ಮೆ ಪುನರಾವರ್ತನೆ ಮಾಡಿದಂತಾಗಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ಇಬ್ಬರು ಐಎಎಫ್ ಪೈಲಟ್‌ಗಳಾದ ವಿಂಗ್ ಕಮಾಂಡರ್ ಮೋಹಿತ್ ರಾಣಾ ಮತ್ತು ಫ್ಲೈಟ್ ಲೆಫ್ಟಿನೆಂಟ್ ಅದ್ವಿತಿಯಾ ಬಾಲ್ ಹುತಾತ್ಮರಾಗಿದ್ದಾರೆ.
ಸಾವಿಗೀಡಾದವರ ವಿವರ: ಮಿಗ್-21 ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳ ಸಂಖ್ಯೆಯನ್ನು ನಿಖರವಾಗಿ ಐಎಎಫ್ ನೀಡಲು ನಿರಾಕರಿಸಿದ್ದರೂ, ಇಲ್ಲಿಯವರೆಗೆ ಸುಮಾರು 200 ಐಎಎಫ್ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. 1963 ರಲ್ಲಿ ಐಎಎಫ್‌ಗೆ ರಷ್ಯಾದ ಮೂಲದ ಏರ್ ಫೈಟರ್ಗಳು ಸೇರ್ಪಡೆಯಾದ ನಂತರ ಒಟ್ಟು 293 ಮಿಗ್ -21 ಗಳು ಅಪಘಾತಕ್ಕೀಡಾಗಿವೆ.
ಈವರೆಗಿನ ಒಟ್ಟು ಅಪಘಾತ: Mig-21 ಗಳ ಭಾಗಗಳನ್ನು ಮೊದಲು ರಷ್ಯಾದ ಶೆಲ್ಫ್‌ನಿಂದ ಖರೀದಿಸಲಾಗುತ್ತಿತ್ತು. ಅವುಗಳಲ್ಲಿ ಈಗ ಅರ್ಧಕ್ಕಿಂತ ಹೆಚ್ಚು ಭಾರತದಲ್ಲಿ ತಯಾರಿಸಲಾಗುತ್ತಿದೆ. 2022 ಇದು ಮೊದಲ ಅಪಘಾತವಾದರೆ 2021 ರ ಆರಂಭದಿಂದ ಆರು ಮಿಗ್ -21 ಅಪಘಾತಕ್ಕೆ ಈಡಾಗಿವೆ. ನಿನ್ನೆ ನಡೆದ ಅಪಘಾತಕ್ಕೂ ಮೊದಲು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಡಿಸೆಂಬರ್ 24, 2021 ರಂದು ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರು ಹುತಾತ್ಮರಾಗಿದ್ದರು.
ಆರಂಭ ಎಲ್ಲಿಂದ: MiG-21 ಅಪಘಾತಗಳ ಇತಿಹಾಸದಲ್ಲಿಯೇ ಇಲ್ಲಿಯವರೆಗಿನ ಅತ್ಯಂತ ಕೆಟ್ಟ ಅಪಘಾತಗಳು ಎಂದರೆ ಅದು 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ. ಆ ವೇಳೆ 16 ವಿಮಾನಗಳು ಪತನಗೊಂಡಿದ್ದವು. ಕಾರ್ಗಿಲ್‌ಗಿಂತ ಮೊದಲು, ಪಾಕಿಸ್ತಾನದಿಂದ ಬಾಂಗ್ಲಾದೇಶದ ವಿಮೋಚನೆಗಾಗಿ 1971 ರ ಯುದ್ಧದಲ್ಲಿ 11 ಅಪಘಾತಗಳು ನಡೆದಿದ್ದವು.
2016 ರಲ್ಲಿ ರಕ್ಷಣಾ ಸಚಿವಾಲಯವು ನಡೆಸಿದ ಆಂತರಿಕ ಲೆಕ್ಕಪರಿಶೋಧನಾ ವರದಿ ಪ್ರಕಾರ 1970 ರಿಂದ 170 ಕ್ಕೂ ಹೆಚ್ಚು ಭಾರತೀಯ ಪೈಲಟ್‌ಗಳು ಮತ್ತು 40 ನಾಗರಿಕರು ಮಿಗ್ -21 ಅಪಘಾತಗಳಲ್ಲಿ ಸಾವಿಗೀಡಾಗಿದ್ದಾರಂತೆ.
ಈ ಅಪಘಾತಗಳು ಯಾಕೆ ನಡೆಯುತ್ತಿವೆ ಎಂಬುದನ್ನು ತಜ್ಞರು ಕಂಡುಕೊಳ್ಳಲು ಮುಂದಾಗಿದ್ದಾರೆ. ರನ್‌ವೇಯೊಂದಿಗಿನ ಸಂಪರ್ಕಕ್ಕೆ ಅಡ್ಡಿಯುಂಟುಮಾಡುವ ಮೇಲಾವರಣ ವಿನ್ಯಾಸ ಮತ್ತು ಏಕ-ಎಂಜಿನ್ ಎಂದು ಹೇಳಲಾಗುತ್ತಿದೆ.
ಸಚಿವಾಲಯ ಹೇಳೋದೇನು?: ರಕ್ಷಣಾ ಸಚಿವಾಲಯದ ಆಂತರಿಕ ಲೆಕ್ಕಪರಿಶೋಧನಾ ವರದಿ ಪ್ರಕಾರ ಇದಕ್ಕೆ ಮುಖ್ಯ ಕಾರಣವೆಂದರೆ, USSR ಪತನದ ನಂತರ MIG ರಷ್ಯನ್ ಕಾರ್ಪೊರೇಶನ್‌ನಿಂದ ಬಿಡಿಭಾಗಗಳು ಮತ್ತು ಇತರ ನಿರ್ಣಾಯಕ ಉಪಕರಣಗಳು ತಯಾರಾಗುತ್ತಿಲ್ಲ. ಐಎಎಫ್ ಸಿಐಎಸ್ ದೇಶಗಳು ಮತ್ತು ಹೆಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಮೇಲೆ ಅವಲಂಬಿತವಾಗಿದೆ. ಇವು ಮಿಗ್‌ಗಳಿಗೆ ಬಿಡಿಭಾಗಗಳನ್ನು ಪೂರೈಸುವ ಮೂಲವಾಗಿವೆ.
ಸೋವಿಯತ್ ಯುಗದ ರಷ್ಯಾದ ಮೂಲದ ವಿಮಾನದ ಪ್ರಮುಖ ತಂತ್ರಜ್ಞಾನವು 1950 ರ ದಶಕದದ್ದಾಗಿದೆ. MiG-21 ಅನ್ನು 1990 ರ ದಶಕದಲ್ಲಿ ಐಎಎಪ್ ನಿಂದ ಹಂತಹಂತವಾಗಿ ಕಡಿಮೆ ಮಾಡಲಾಗಿದೆ ಎಂದು ಅಂದುಕೊಳ್ಳಲಾಗಿತ್ತು. ಆದರೆ, ಅದರ ಬದಲಾಗಿ ಅದನ್ನೇ ನವೀಕರಿಸಿಕೊಂಡು ಬರಲಾಗುತ್ತಿದೆ. ಜೊತೆಗೆ ಅದನ್ನು 'ಬೈಸನ್' ಎಂದು ಪರಿಚಯಿಸಲಾಗಿದೆ.
ಪ್ರಸ್ತುತ, ಐಎಎಪ್ MiG-21 'ಬೈಸನ್' ವಿಮಾನದ ನಾಲ್ಕು ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುತ್ತದೆ. ಪ್ರತಿ ಸ್ಕ್ವಾಡ್ರನ್‌ನಲ್ಲಿ 16-18 ವಿಮಾನಗಳು ಐದು ವರ್ಷಗಳಲ್ಲಿ ಅವುಗಳ ಕಾರ್ಯಾಚರಣೆಯ ಅಂತ್ಯವನ್ನು ಸಮೀಪಿಸುತ್ತಿವೆ. ಇನ್ನು ಇದರಲ್ಲಿ ಒಂದು ಸ್ಕ್ವಾಡ್ರನ್ ಎರಡು ತಿಂಗಳೊಳಗೆ ನಿವೃತ್ತಿ ಹೊಂದಲಿದ್ದರೆ, ಉಳಿದ ಎಲ್ಲಾ ಮೂರು ಸ್ಕ್ವಾಡ್ರನ್‌ಗಳು ಸುಮಾರು ಮೂರು ವರ್ಷಗಳಲ್ಲಿ ನಿವೃತ್ತರಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಪತನಗೊಂಡು ಹೊತ್ತಿ ಉರಿದ ಮಿಗ್-21 ಯುದ್ಧ ವಿಮಾನ: ಇಬ್ಬರು ಪೈಲಟ್ಸ್ ಸಾವು