ನವದೆಹಲಿ: ಅದಾನಿ ಗ್ರೂಪ್ ಮೇಲೆ ಹಗರಣದ ಆರೋಪ ಹೊರಿಸಿರುವ ಅಮೆರಿಕದ ಹಿಂಡನ್‌ಬರ್ಗ್ ವರದಿ "ಉದ್ದೇಶಪೂರ್ವಕ" ಎಂದೆನಿಸುತ್ತಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ, ವಿರೋಧ ಪಕ್ಷಗಳ ಪ್ರಮುಖ ನಾಯಕ ಶರದ್ ಪವಾರ್ ಹೇಳಿದ್ದಾರೆ.
ಅದಾನಿ ಮತ್ತು ಪ್ರಧಾನಿ ಮೋದಿ ಅವರ ಸ್ನೇಹ ಪ್ರಶ್ನಿಸಿ, ಗ್ರೂಪ್ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀವ್ರ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ಗೆ ಅದರ ಮಿತ್ರಪಕ್ಷದ ನಾಯಕನ ಈ ಹೇಳಿಕೆ ಅಚ್ಚರಿ ತಂದಿದೆ. ಜೆಪಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಜೊತೆಗೂಡಿ ಹಲವು ವಿಪಕ್ಷಗಳು ಹೋರಾಟ ನಡೆಸುತ್ತಿದ್ದು, ಸಂಸತ್ ಕಲಾಪ ಸತತ ವೈಫಲ್ಯ ಕಾಣುತ್ತಿದೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶರದ್ ಪವಾರ್ ಅವರು, ಅದಾನಿ ಗ್ರೂಪ್ ಮೇಲಿನ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ಸಮಿತಿ ನೇಮಿಸಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಯ ಅಗತ್ಯವಿಲ್ಲ. ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗ್ರೂಪ್ ಅನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿದ್ದಾರೆ.
ವಿದೇಶಿ ವರದಿಯಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಹಿಂದೆಯೂ ಇಂತಹ ಹೇಳಿಕೆಗಳನ್ನು ನೀಡಿದ್ದು ಕೋಲಾಹಲ ಸೃಷ್ಟಿಸಿತ್ತು. ಪ್ರತಿ ಬಾರಿಯೂ ಯಾವುದೋ ವರದಿ, ವ್ಯಕ್ತಿಯ ಹೇಳಿಕೆ ಸಮಸ್ಯೆಯನ್ನುಂಟು ಮಾಡುತ್ತದೆ. ಅದಕ್ಕೂ ಮೊದಲು ಆ ಹೇಳಿಕೆಯ ಹಿಂದಿನ ಉದ್ದೇಶ ಮತ್ತು ಆ ವ್ಯಕ್ತಿ ಯಾರು ಎಂಬುದನ್ನು ಅರಿಯಬೇಕು. ವರದಿಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಅದು ದೇಶದ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಮುಖ್ಯ ಎಂದಿದ್ದಾರೆ.
ಈಗ ಕೇಳಿ ಬಂದಿರುವ ಅದಾನಿ ಗ್ರೂಪ್ ಮೇಲಿನ ವರದಿಯೂ ಇದೇ ರೀತಿಯಲ್ಲಿದೆ. ಯಾವುದೋ ಕಾರಣಕ್ಕಾಗಿ ಟಾರ್ಗೆಟ್ ಮಾಡಲಾಗಿದೆ. ವರದಿಯ ಮೇಲಿನ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮಾಧ್ಯಮಕ್ಕೆ ಸಂದರ್ಶನದ ವೇಳೆ ಹೇಳಿದ್ದಾರೆ.
ಜೆಪಿಸಿ ತನಿಖೆ ಬೇಕಿಲ್ಲ: ಅದಾನಿ ಗ್ರೂಪ್ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ಕೇಳಿ ಬಂದಿರುವ ಒತ್ತಾಯ ಅಗತ್ಯವಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ ತನಿಖೆಗಾಗಿ ಸಮಿತಿ ಮಾಡಿದೆ. ಅದರಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು, ತಜ್ಞರು, ಆಡಳಿತಗಾರರು ಮತ್ತು ಅರ್ಥಶಾಸ್ತ್ರಜ್ಞರನ್ನು ಹೊಂದಿದೆ. ಅದಕ್ಕೆ ಕಾಲಮಿತಿ ನೀಡಲಾಗಿದ್ದು, ವರದಿ ಸಿದ್ಧ ಮಾಡುತ್ತಿದೆ. ಈ ಮಧ್ಯೆ ಇನ್ನೊಂದು ಸಮಿತಿಯ ತನಿಖೆ ಅಗತ್ಯವಿಲ್ಲ ಎಂದಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಅದಕ್ಕೆ ಬಹುಮತವಿದೆ. ತನಿಖಾ ಸಮಿತಿಯಲ್ಲಿ ಬಹುಮತವಿರುವ ಪಕ್ಷದ ಸದಸ್ಯರೇ ಹೆಚ್ಚಿರುತ್ತಾರೆ. ಸತ್ಯ ನಿಖರವಾಗಿ ಹೊರಬರುವ ಸಾಧ್ಯತೆ ಕಮ್ಮಿ. ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ತನಿಖೆ ನಡೆಸಿದರೆ, ಅಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಸತ್ಯ ಹೊರಬರಲು ಉತ್ತಮ ಅವಕಾಶವಿದೆ. ಸುಪ್ರೀಕೋರ್ಟ್ ಈ ಬಗ್ಗೆ ಆದೇಶ ನೀಡಿದಲ್ಲಿ ಜೆಪಿಸಿ ತನಿಖೆಯ ಅಗತ್ಯವಿಲ್ಲ" ಎಂದು ಶರದ್ ಪವಾರ್ ಹೇಳಿದ್ದಾರೆ.
ಹಿಂಡನ್‌ಬರ್ಗ್- ಅದಾನಿ ವಿವಾದದ ತನಿಖೆಗಾಗಿ ಜೆಪಿಸಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪಟ್ಟು ಹಿಡಿದಿವೆ. ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸಂಸತ್ತಿನಲ್ಲಿ ನಡೆಯಬೇಕಿದ್ದ ಬಜೆಟ್ ಅಧೀವೇಶನ ಸಂಪೂರ್ಣವಾಗಿ ಹಾಳಾಗಿದೆ. ದಿನವೂ ಪ್ರತಿಭಟನೆಗಳು ನಡೆಯುತ್ತಿದ್ದು, ಕಲಾಪ ಮುಂದೂಡುತ್ತಲೇ ಬರಲಾಗುತ್ತಿದೆ.