ಮುಂಬೈ (ಮಹಾರಾಷ್ಟ್ರ): ಬೆಳಗಾವಿ ಗಡಿ ವಿವಾದದ ಬಗ್ಗೆ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಇಬ್ಬರೂ ಮಾತುಕತೆ ಮೂಲಕ ಸಮನ್ವಯತೆ ಸಾಧಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಒತ್ತಾಯಿಸಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಶರದ್ ಪವಾರ್, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯಿಂದ ಗಡಿ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಇದೇ ವೇಳೆ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ತುರ್ತು ಮತ್ತು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರ ಇಷ್ಟು ದಿನ ಸಂಯಮ ಕಾಯ್ದುಕೊಂಡಿದೆ. ಆದರೆ, ಜನರು ಸುಮ್ಮನಿರುವುದಿಲ್ಲ. 48 ಗಂಟೆಯೊಳಗೆ ಗಲಾಟೆ ನಿಲ್ಲಬೇಕು. ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು ಮತ್ತು ಇದು ತಪ್ಪು ದಿಕ್ಕಿನಲ್ಲಿ ಹೋಗಬಾರದು. ಇಷ್ಟರಲ್ಲಿ ಪರಿಸ್ಥಿತಿ ಶಾಂತವಾಗಿದ್ದರೆ, ನಾನು ಕೂಡ ಬೆಳಗಾವಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಿಎಂ ಶಿಂಧೆ ಎಲ್ಲರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: ಜೊತೆಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಿಎಂ ಏಕನಾಥ್ ಶಿಂಧೆ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈಗ ಸಂಸತ್ ಅಧಿವೇಶನ ಸಹ ಆರಂಭವಾಗಲಿದ್ದು, ಎಲ್ಲ ಸಂಸದರು ಒಗ್ಗೂಡಿ ಒಂದೇ ನಿಲುವು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಹಾರಾಷ್ಟ್ರ ಸಂಸದರು ಭೇಟಿ ಮಾಡಲು ನಿರ್ಧರಿಸಿರುವ ವಿಚಾರವಾಗಿ ಮಾತನಾಡಿರುವ ಶರದ್ ಪವಾರ್, ಕಾನೂನನ್ನು ಕೈಗೆತ್ತಿಕೊಳ್ಳದಂತೆ ಕೇಂದ್ರ ಸರ್ಕಾರ ಸೂಚಿಸಬೇಕು. ಇಲ್ಲವಾದಲ್ಲಿ ಈ ಸಮಸ್ಯೆಗೆ ಕೇಂದ್ರವನ್ನೂ ದೂಷಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿಗೆ ಫಡ್ನವೀಸ್ ಕರೆ: ಇದೇ ವಿಷಯವಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರದಿಂದ ಬರುವ ವಾಹನಗಳಿಗೆ ರಕ್ಷಣೆ ನೀಡುವಂತೆ ಎಂದು ಸಿಎಂ ಬೊಮ್ಮಾಯಿಗೆ ಫಡ್ನವೀಸ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗಡಿ ಪ್ರವೇಶಕ್ಕೆ ಓಡೋಡಿ ಬಂದ ಶಿವಸೇನೆ ಜಿಲ್ಲಾಧ್ಯಕ್ಷ..ವಶಕ್ಕೆ ಪಡೆದ ಪೊಲೀಸರು