ಬೆಂಗಳೂರು: ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಬೆಂಗಳೂರಿನಲ್ಲಿದ್ದ ಕೇರಳ ಮೂಲದ ಬಹ್ರೇನ್‌ನ ಮಾಜಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 12 ರಂದು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಸುಮಾರು 1 ಕೋಟಿ ರೂ ಮೌಲ್ಯದ 3.5 ಕಿಲೋಗ್ರಾಂಗಳಷ್ಟು ಹಶಿಶ್ ಎಣ್ಣೆ ಪತ್ತೆ ಹಚ್ಚಿದ್ದರು. ಆ ಬಳಿಕ ತನಿಖೆ ಕೈಗೊಂಡ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಮಾಜಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಈ ಮಾಜಿ ಅಧಿಕಾರಿಯನ್ನು ಪ್ರಕರಣದ ಕಿಂಗ್‌ಪಿನ್ ಎಂದು ಹೇಳಲಾಗುತ್ತಿದೆ.
ಆರೋಪಿಯು ಮಾದಕ ವಸ್ತುಗಳನ್ನು ದೇವರ ಪ್ರಸಾದದ ಡಬ್ಬದಲ್ಲಿಟ್ಟು ಅಥವಾ ಆಯುರ್ವೇದ ಔಷಧಿಗಳಂತೆ ಪ್ಯಾಕ್ ಮಾಡಿ ಅಕ್ರಮವಾಗಿ ಗಲ್ಫ್ ರಾಷ್ಟ್ರಗಳಿಗೆ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಹ್ರೇನ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದ 52 ವರ್ಷದ ಕಿಂಗ್ಪಿನ್ನ ಅಕ್ರಮಗಳು ಹೊರಬಿದ್ದಿವೆ.
ಆರೋಪಿಯು ಮೂರು ವರ್ಷಗಳಿಂದ ಡ್ರಗ್ ಪೆಡ್ಲಿಂಗ್ ಮಾಫಿಯಾ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತ ಬಹ್ರೇನ್‌ನಲ್ಲಿ 20 ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, 2014ರಲ್ಲಿ ಕೇರಳದಲ್ಲಿ ನೆಲೆಸಿದ ನಂತರ ಡ್ರಗ್ ಮಾಫಿಯಾ ಪ್ರಾರಂಭಿಸಿದ್ದಾನೆ ಎಂದು ತಿಳಿದುಬಂದಿದೆ.