ಹೈದರಾಬಾದ್ : 2017ರಲ್ಲಿ ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಸ್ಥಳೀಯ ನ್ಯಾಯಾಲಯವೊಂದು ಜಾರಿ ಮಾಡಿದೆ.
ಸಂಸದರು ಮತ್ತು ಶಾಸಕರನ್ನು ವಿಚಾರಣೆಗೊಳಪಡಿಸುವ ವಿಶೇಷ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದು, ಆಲ್ ಇಂಡಿಯಾ ಮಜ್ಲೀಸ್ ಇತ್ತೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಪಕ್ಷ ಮಾನನಷ್ಟ ಮೊಕದ್ದಮೆಯನ್ನು ದಿಗ್ವಿಜಯ್ ವಿರುದ್ಧ ಹೂಡಿತ್ತು.
ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಹೇಳಿಕೆ ನೀಡಿ, ಎಐಎಂಐಎಂ ಪಕ್ಷ ಹಣ ಪಡೆಯಲು ಮಾತ್ರ ಬೇರೆ ರಾಜ್ಯಗಳಲ್ಲಿ ಸ್ಪರ್ಧೆ ಮಾಡುತ್ತದೆ ಎಂದು ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ಪಕ್ಷದ ಮುಖಂಡನಾದ ಎಸ್.ಎ.ಹುಸೇನ್ ಅನ್ವರ್ ಮಾನನಷ್ಟ ಮೊಕದ್ದಮೆ ಹೂಡಿದ್ದನು.
ಇದನ್ನೂ ಓದಿ: ಕರ್ನಾಟಕ-ಕೇರಳ ಗಡಿ ನಿರ್ಬಂಧ ವಿಚಾರ ಕೇಂದ್ರ ಸರ್ಕಾರದ ಗಮನಕ್ಕೆ : ಸಿಎಂ ಪಿಣರಾಯಿ
ಅರ್ಜಿದಾರನ ಪರ ವಕೀಲನಾದ ಮೊಹಮದ್ ಅಸೀಫ್ ಅಮ್ಜದ್ ಈ ಕುರಿತಂತೆ ದಿಗ್ವಿಜಯ್ ಸಿಂಗ್ಗೆ ಮತ್ತು ಉರ್ದು ದಿನ ಪತ್ರಿಕೆಯ ಸಂಪಾದಕರಿಗೆ ನೋಟಿಸ್ ಕಳುಹಿಸಿ, ಕ್ಷಮೆ ಕೇಳುವಂತೆ ಹೇಳಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲಾಗಿದೆ.
ಈ ದೂರಿನ ವಿಚಾರಣೆ ನಡೆಸಿದ ಕೋರ್ಟ್ ದಿಗ್ವಿಜಯ್ ಸಿಂಗ್ ಮತ್ತು ಪತ್ರಿಕೆಯ ಸಂಪಾದಕರು ಫೆಬ್ರವರಿ 22ರಂದು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಇಂದೂ ಕೂಡಾ ಹಾಜರಾಗಿರಲಿಲ್ಲ.
ದಿಗ್ವಿಜಯ್ ಸಿಂಗ್ ಪರ ವಕೀಲರು ವೈದ್ಯಕೀಯ ಕಾರಣದಿಂದ ಕೋರ್ಟ್ಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದ್ದು, ಮಾರ್ಚ್ 8ರಂದು ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಿದೆ.