ಛತ್ತೀಸ್‌ಗಢ: ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡನನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ. ಮುಂಡತಿಕ್ರಾ ಗ್ರಾಮದ 43 ವರ್ಷದ ಕೋಮಲ್ ಮಾಂಝಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಅಮ್ಡಾಯಿ ಗಣಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ 10.30ರ ಸುಮಾರಿಗೆ ಗ್ರಾಮದಲ್ಲಿರುವ ಶೀತಲ ದೇವಸ್ಥಾನಕ್ಕೆ ಕೋಮಲ್ ಮಾಂಝಿ ತೆರಳುತ್ತಿದ್ದರು. ದಾರಿಯಲ್ಲಿ ಬಿಜೆಪಿ ಮುಖಂಡನನ್ನು ತಡೆದ ಮಾವೋವಾದಿಗಳ ಗುಂಪು ಕೊಡಲಿಯಿಂದ ಹೊಡೆದು ಕೊಲೆಗೈದಿದ್ದಾರೆ. ಮೂಲಗಳಂತೆ, ಮಾವೋವಾದಿಗಳು ಮಾಂಝಿಗೆ ಈ ಹಿಂದೆ ಹಲವು ಬಾರಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ನಂತರ ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಬಿಗಿ ಭದ್ರತೆಯನ್ನು ಒದಗಿಸಿದ್ದರು. ಬಳಿಕ, ಮಾಂಝಿ ಪೊಲೀಸರ ಸಹಾಯ ಪಡೆಯಲು ನಿರಾಕರಿಸಿದ್ದರು.
ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹಗಲು ಹೊತ್ತಿನಲ್ಲಿ ಮಾವೋವಾದಿಗಳು ನಡೆಸಿದ ಮೂರನೇ ಕೊಲೆ ಪ್ರಕರಣ ಇದಾಗಿದ್ದು, ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರ್ ಸಾಹು ಹಾಗೂ ರತನ್ ದುಬೆ ಅವರನ್ನು ನಕ್ಸಲೀಯರು ಹತ್ಯೆ ಮಾಡಿದ್ದರು.
ಇದನ್ನೂ ಓದಿ: ಛತ್ತೀಸ್‌ಗಢ - ತೆಲಂಗಾಣ ಗಡಿಯಲ್ಲಿ ನಕ್ಸಲರ ಅಟ್ಟಹಾಸ: 25 ವ್ಯಾಪಾರಿಗಳ ಅಪಹರಿಸಿ ಎಚ್ಚರಿಕೆ
ಅಮ್ಡಾಯಿ ಗಣಿಗಾರಿಕೆಯನ್ನು ಮಾವೋವಾದಿಗಳು ವಿರೋಧಿಸುತ್ತಲೇ ಬಂದಿದ್ದು, ಈ ಗಣಿಯೊಂದಿಗೆ ನಂಟು ಹೊಂದಿರುವ ಕಾರಣದಿಂದ ಜಿಲ್ಲೆಯ ಬಿಜೆಪಿ ನಾಯಕರ ಮೇಲೆ ಮಾವೋವಾದಿಗಳು ಸತತ ಮೂರನೇ ಬಾರಿಗೆ ದಾಳಿ ನಡೆಸಿದ್ದಾರೆ. ಫೆಬ್ರವರಿ 10 ಮತ್ತು ನವೆಂಬರ್ 4 ರಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರ್ ಸಾಹು ಮತ್ತು ರತನ್ ದುಬೆ ಅವರನ್ನು ಕೊಂದಿದ್ದರು. ಸಾಹು ಅವರನ್ನು ಎಕೆ -47 ಬಳಸಿ ಕೊಲ್ಲಲಾಗಿದ್ದು, ದುಬೆ ಅವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: ನಾಯಕರ ಎನ್ಕೌಂಟರ್, ಬಂಧನ; ಅಸ್ತಿತ್ವ ಕಳೆದುಕೊಳ್ಳುತ್ತಿರುವ ನಿಷೇಧಿತ ಮಾವೋವಾದಿ ಸಂಘಟನೆ