ಬಿಜಾಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಿಜಾಪುರದಲ್ಲಿ ಹೊಸ ವರ್ಷದ ಮೊದಲ ದಿನವೇ ನಕ್ಸಲರು ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ. ಇಲ್ಲಿನ ಗಂಗಲೂರು ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಆರು ತಿಂಗಳ ಕಂದಮ್ಮ ಸಾವನ್ನಪ್ಪಿದೆ. ಈ ಘಟನೆಯಲ್ಲಿ ಮಗುವಿನ ತಾಯಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಡಿಆರ್‌ಜಿ ಯೋಧರು ಸಹ ಗಾಯಗೊಂಡಿದ್ದಾರೆ.
ಮಗುವಿನ ತಾಯಿಯ ಕೈಗೆ ತಗುಲಿದ ಗುಂಡು: ಬಿಜಾಪುರದ ಗಂಗಳೂರಿನ ಮುತವಂಡಿ ಗ್ರಾಮದಲ್ಲಿ ಈ ನಕ್ಸಲ್ ಎನ್‌ಕೌಂಟರ್ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಡಿಆರ್‌ಜಿ ಯೋಧರು ಗಾಯಗೊಂಡಿದ್ದಾರೆ. ನಕ್ಸಲರ ಗುಂಡಿನ ದಾಳಿಯಲ್ಲಿ ಗ್ರಾಮದ 6 ತಿಂಗಳ ಹೆಣ್ಣು ಶಿಶು ಸಾವನ್ನಪ್ಪಿದೆ. ಮಗುವಿನ ತಾಯಿಯ ಕೈಗೆ ಗುಂಡು ತಗುಲಿದೆ. ಘಟನೆಯ ನಂತರ, ಸಂತ್ರಸ್ತೆಯ ಕುಟುಂಬಕ್ಕೆ ಸಹಾಯ ಮಾಡಲು ಭದ್ರತಾ ಪಡೆಗಳ ತಂಡವು ಗ್ರಾಮದಲ್ಲಿ ಬೀಡುಬಿಟ್ಟಿದೆ. ಮಹಿಳೆಗೆ ಚಿಕಿತ್ಸೆ ನೀಡಲು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಬ್ಬರು ಡಿಆರ್‌ಜಿ ಯೋಧರಿಗೆ ಗಾಯ: ಈ ಘಟನೆಯಲ್ಲಿ ಇಬ್ಬರು ಡಿಆರ್‌ಜಿ ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಬಿಜಾಪುರದ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ನಕ್ಸಲರ ಪತ್ತೆಗಾಗಿ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಪಡೆಗಳಿಂದ ಆ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಪ್ರಸ್ತುತ ಪರಿಸ್ಥಿತಿ ಹತೋಟಿಗೆ ಬಂದಿದೆ.
ಕೆಲವು ನಕ್ಸಲರಿಗೆ ಗಾಯ: ಭದ್ರತಾ ಪಡೆಗಳು, ಬಿಜಾಪುರ ಪೊಲೀಸರಿಂದ ಪ್ರತಿದಾಳಿಯಲ್ಲಿ ಕೆಲವು ನಕ್ಸಲರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಭೈರನಗರ ಪ್ರದೇಶ ಸಮಿತಿ ಕಾರ್ಯದರ್ಶಿ ಚಂದ್ರಣ್ಣ ಹಾಗೂ ಹಲವು ಸದಸ್ಯರು ಗಾಯಗೊಂಡಿದ್ದಾರೆ. ಆದರೆ, ಎಷ್ಟು ಜನ ಮಾವೋವಾದಿಗಳು ಗಾಯಗೊಂಡಿದ್ದಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ದಾಳಿ ನಡೆದ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಎನ್‌ಕೌಂಟರ್ ಸ್ಥಳದಲ್ಲಿ ಡಿಆರ್‌ಜಿ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಂತರ ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.
ಇದನ್ನೂ ಓದಿ: ಸ್ಫೋಟದಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೋ