ಮುಂಬೈ: ಮಹಾರಾಷ್ಟ್ರದ ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲಿಕ್‌ಗೆ ಮುಂಬೈ ಸ್ಫೋಟದ ನಂಟಿದೆ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂಬೈನಲ್ಲಿಂದು ಸುದ್ದಿಗೋಷ್ಠಿ ನಡೆಸಿರುವ ಫಡ್ನವೀಸ್, ದಾವೂದ್ ಕುಟುಂಬದವರು ಸಚಿವ ಮಲಿಕ್ ಅವರ ಜಮೀನು ಖರೀದಿಸಿದ್ದು, ಅವರು ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರು.
ಕುರ್ಲಾದಲ್ಲಿ ಎಲ್‌ಬಿಎಸ್ ರಸ್ತೆಯಲ್ಲಿ 2.80 ಎಕರೆ ಜಾಗವನ್ನು ಗೋವಾಲಾ ಕಾಂಪೌಂಡ್ ಎಂದು ಕರೆಯಲಾಗುತ್ತದೆ. ಈ ಪ್ಲಾಟ್ ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಣಿಯಾಗಿದೆ. ಕಂಪನಿ ನವಾಬ್ ಮಲಿಕ್ ಅವರ ಕುಟುಂಬಕ್ಕೆ ಸೇರಿದ್ದು, ಮಲಿಕ್ ಅವರು ಸದಸ್ಯರಾಗಿದ್ದರು. ಆದರೆ ಸಚಿವರಾದ ನಂತರ ಕಂಪನಿಯಲ್ಲಿನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
'30 ಲಕ್ಷಕ್ಕೆ ನಿವೇಶನ ಖರೀದಿ'
ಭೂಗತ ಲೋಕದ ವ್ಯಕ್ತಿಗಳಿಂದ ಮಲಿಕ್ ಅವರು 30 ಲಕ್ಷಕ್ಕೆ ನಿವೇಶನ ಖರೀದಿಸಿದ್ದಾರೆ. ಕೇವಲ 20 ಲಕ್ಷ ರೂ. ಪಾವತಿಸಲಾಗಿದೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ. ಈ ಡೀಲ್ ಯಾವಾಗ ನಡೆದಿತ್ತು ಎಂಬುದು ನನ್ನ ಪ್ರಶ್ನೆ. ಸಲೀಂ ಪಟೇಲ್ ಯಾರು ಎಂದು ನಿಮಗೆ ತಿಳಿದಿಲ್ಲವೇ? ನೀವು ಅಪರಾಧಿಗಳಿಂದ ಏಕೆ ಜಮೀನು ಖರೀದಿಸಿದ್ದೀರಿ? ಅವರು ಎಲ್‌ಬಿಎಸ್ ರಸ್ತೆಯಲ್ಲಿರುವ ಮೂರು ಎಕರೆ ಜಾಗವನ್ನು 30 ಲಕ್ಷಕ್ಕೆ ಏಕೆ ಮಾರಾಟ ಮಾಡಿದರು ಎಂದು ಫಡ್ನವೀಸ್ ಪ್ರಶ್ನಿಸಿದ್ದಾರೆ.
ರಾಜ್ಯ ಸಚಿವ ನವಾಬ್ ಮಲಿಕ್ ಅವರ ಭೂಗತ ಜಗತ್ತಿನ ಸಂಪರ್ಕದ ಬಗ್ಗೆ ದೀಪಾವಳಿಯ ನಂತರ ಹೊಸ ಬಾಂಬ್ ಸಿಡಿಸುತ್ತೇನೆ ಎಂದು ಫಡ್ನವೀಸ್ ಈ ಹಿಂದೆ ಹೇಳಿದ್ದರು.