ಜೈಪುರ (ರಾಜಸ್ಥಾನ): ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪರೋಕ್ಷವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ಹರಿಹಾಯ್ದಿದ್ದಾರೆ.
"ನಾವು ರೈತರ ಕಲ್ಯಾಣದ ಬಗ್ಗೆ ಮಾತನಾಡಿದರೆ ಅದು ನಿಜವಾದ ರಾಷ್ಟ್ರೀಯತೆ. ಅರ್ಧ ಪ್ಯಾಂಟ್ ಧರಿಸಿ ನಾಗ್ಪುರದಿಂದ ಭಾಷಣ ಮಾಡಿದರೆ ಅದು ನಿಜವಾದ ರಾಷ್ಟ್ರೀಯತೆಯಲ್ಲ" ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಎಂದು ಹೆಸರಿಸದೇ ಪರೋಕ್ಷವಾಗಿ ಪೈಲಟ್ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಕೇಂದ್ರ ಕಚೇರಿ ನಾಗ್ಪುರದಲ್ಲಿದ್ದು, ಇದನ್ನೇ ಗುರಿಯಾಗಿಸಿಕೊಂಡು ಪರೋಕ್ಷವಾಗಿ ಸಚಿನ್ ಪೈಲಟ್ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ.
ಓದಿ : ರಾಜ್ಯಪಾಲರ ಹುದ್ದೆಯ ಪ್ರತಿಷ್ಠೆ ಕಡಿಮೆ ಮಾಡಲು ಬಿಜೆಪಿ ಯತ್ನ: ಪಂಜಾಬ್ ಸಿಎಂ ಗಂಭೀರ ಆರೋಪ
ಕೇಂದ್ರ ಸರಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಚಿನ್ ಪೈಲಟ್ ಆಗ್ರಹಿಸಿದರು. ಇದು ಕೇಂದ್ರ ಸರಕಾರದಿಂದ ಬಗೆಹರಿಸಲು ಸಾಧ್ಯವಾಗದಷ್ಟು ದೊಡ್ಡ ಸಮಸ್ಯೆಯಲ್ಲ. ಹೊಸ ಕೃಷಿ ಕಾನೂನುಗಳೊಂದಿಗೆ ಬಿಜೆಪಿ ರೈತರನ್ನು ಕತ್ತಲೆಗೆ ತಳ್ಳುತ್ತಿದೆ. ಕೆಲವು ಕಾಯ್ದೆಗಳನ್ನು ಹಿಂಪಡೆಯುವುದರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅವರು ಕಾನೂನುಗಳನ್ನು ಹಿಂತೆಗೆದುಕೊಂಡರೆ ನಾವು ಧನ್ಯವಾದ ಸಲ್ಲಿಸಲಿದ್ದೇವೆ. ಆದರೆ, ಕೇಂದ್ರ ಸರ್ಕಾರ ಈ ಕಾನೂನನ್ನು ಹಿಂಪಡೆಯಬಾರದು ಎನ್ನುವ ಅಚಲ ನಿರ್ಧಾರವನ್ನು ಹೊಂದಿದೆ ಎಂದು ಆರೋಪಿಸಿದರು.