ನವದೆಹಲಿ: ನೀಟ್-ಪಿಜಿ 2021 ಕೌನ್ಸೆಲಿಂಗ್ ವಿಳಂಬ ಹಾಗೂ ವೈದ್ಯರ ಮೇಲೆ ಪೊಲೀಸರು ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ನಿವಾಸಿ ವೈದ್ಯರು ತಮ್ಮ ರಾಷ್ಟ್ರವ್ಯಾಪಿ ಮುಷ್ಕರವನ್ನು ಹಿಂಪಡೆದಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಮತ್ತೆ ತಮ್ಮ ಸೇವೆ ಆರಂಭಿಸಲಿದ್ದಾರೆ.
ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (FORDA) ಮತ್ತು ದೆಹಲಿಯ ಜಂಟಿ ಪೊಲೀಸ್ ಆಯುಕ್ತರ ನಡುವಿನ ಸಭೆಯ ನಂತರ ಮುಷ್ಕರಕ್ಕೆ ತೆರೆ ಎಳೆಯಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಫೋರ್ಡಾ ಅಧ್ಯಕ್ಷ ಡಾ.ಮನೀಶ್, ಈಗಾಗಲೇ ರೋಗಿಗಳು ಚಿಕಿತ್ಸೆಯಿಲ್ಲದೇ ಬಳಲುತ್ತಿದ್ದಾರೆ, ಅನೇಕ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಈ ಪರಿಸ್ಥಿತಿಯನ್ನು ಪರಿಗಣಿಸಿ ಮುಷ್ಕರವನ್ನು ಹಿಂಪಡೆದಿದ್ದೇವೆ. ಅಲ್ಲದೇ ದೆಹಲಿ ಪೊಲೀಸರು ಎಫ್‌ಐಆರ್ ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ವೈದ್ಯರು ಮತ್ತು ಪೊಲೀಸರ ನಡುವಿನ ವಿಶ್ವಾಸವನ್ನು ಪುನರ್ ನಿರ್ಮಿಸಲು ಜಂಟಿ ಪೊಲೀಸ್ ಆಯುಕ್ತರು ವೀಡಿಯೊ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: 'ವೈದ್ಯರು ಇರಬೇಕಾಗಿರುವುದು ಆಸ್ಪತ್ರೆಯಲ್ಲಿ, ಬೀದಿಗಳಲ್ಲಿ ಅಲ್ಲ': ಪ್ರಧಾನಿಗೆ ಸಿಎಂ ಕೇಜ್ರಿವಾಲ್ ಪತ್ರ
ಡಿಸೆಂಬರ್ 29 ರಿಂದ ದೇಶಾದ್ಯಂತ ತುರ್ತು ಸೇವೆಗಳು ಸೇರಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ ಕರೆ ನೀಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಫೋರ್ಡಾದ 12 ಸದಸ್ಯರ ನಿಯೋಗದೊಂದಿಗೆ ತುರ್ತು ಸಭೆ ನಡೆಸಿತು. ಆದರೆ ಸಭೆ ವಿಫಲವಾಗಿತ್ತು. ದೆಹಲಿಯಲ್ಲಿ ಫೋರ್ಡಾ ನೇತೃತ್ವದಲ್ಲಿ ನಡೆದ ವೈದ್ಯರ ಪ್ರತಿಭಟನೆ ನಿನ್ನೆ ನಾಟಕೀಯ ತಿರುವು ಪಡೆದುಕೊಂಡಿತ್ತು. ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡಿದಿತ್ತು. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು.