ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಲಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಿರಿಯ ನಾಯಕರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ಮುಂದುವರೆಸಲಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ನಾಯಕರ ತೀವ್ರ ಪ್ರತಿಭಟನೆ ನಡುವೆ, ವಯನಾಡು ಸಂಸದರೂ ಆಗಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಜೂನ್ 13 ರಿಂದ 15 ರವರೆಗೆ ವಿಚಾರಣೆ ನಡೆಸಿತ್ತು. ಸುಮಾರು 30 ಗಂಟೆಗಳಿಗೂ ಹೆಚ್ಚಿನ ಕಾಲ ಅವರನ್ನು ಪ್ರಶ್ನೆ ಮಾಡಿತ್ತು.
ಗಮನಾರ್ಹ ವಿಷಯ ಎಂದರೆ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಇಡಿ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ಶುಕ್ರವಾರದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಅಧಿಕಾರಿಗಳನ್ನು ಕೋರಿಕೊಂಡಿದ್ದರು. ಈ ಮನವಿಗೆ ಒಪ್ಪಿಗೆ ನೀಡಿದ್ದ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಜೂನ್ 17 ರಿಂದ ಜೂನ್ 20 ರವರೆಗೆ ಅವರ ವಿಚಾರಣೆ ಮುಂದೂಡಬೇಕು ಎಂಬ ಕಾಂಗ್ರೆಸ್ ಮಾಜಿ ಅಧ್ಯಕ್ಷರ ಮನವಿಯನ್ನು ಇಡಿ ಸಮ್ಮತಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಇಡಿ ಮುಂದೆ ಹಾಜರಾಗಲಿದ್ದಾರೆ.
ಅಗ್ನಿಪಥ ನೇಮಕ ವಿರೋಧಿಸಿ ಇಂದು ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ: ಅಗ್ನಿಪಥ್ ನೇಮಕಾತಿ ಯೋಜನೆ ವಿರೋಧಿಸಿ ಕಾಂಗ್ರೆಸ್ ಇಂದು ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲಿದೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಯುವ ವಿರೋಧಿ ಅಗ್ನಿಪಥ ಯೋಜನೆ ವಿರುದ್ಧ ಮತ್ತು ಸಂಸದ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಡಿ ವಿಚಾರಣೆ ವಿರುದ್ಧ ಇಂದು ದೇಶಾದ್ಯಂತ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆಗಳನ್ನು ಮುಂದುವರೆಸಲಿದ್ದಾರೆ. ಕಾಂಗ್ರೆಸ್ ನಿಯೋಗ ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ:ಅಗ್ನಿವೀರರು 4 ವರ್ಷದ ಸೇವೆ ನಂತರ ನಮ್ಮ ಪಕ್ಷದ ಕಚೇರಿಯಲ್ಲಿ ಸೆಕ್ಯುರಿಟಿ ಆಗಬಹುದು: ಕೈಲಾಶ್ ವಿಜಯವರ್ಗಿಯಾ