ರಾಷ್ಟ್ರೀಯ ವೈದ್ಯರ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ಆಚರಿಸಲಾಗುತ್ತದೆ. ವೈದ್ಯರನ್ನು ಗೌರವಿಸಲು ಮತ್ತು ದಿನದ 24 ಗಂಟೆಯೂ ನಿಸ್ವಾರ್ಥವಾಗಿ ಜನರಿಗೆ ಸೇವೆ ಸಲ್ಲಿಸುವ ವೈದ್ಯಕೀಯ ವೃತ್ತಿಪರರಿಗೆ ಕೃತಜ್ಞತೆ ತೋರ್ಪಡಿಸಲು ಈ ದಿನ ಆಚರಣೆ ಮಾಡಲಾಗುತ್ತದೆ.
ಪ್ರಸಿದ್ಧ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣದ ವಾರ್ಷಿಕೋತ್ಸವದ ದಿನವನ್ನು ಸಹ ದಿನಾಚರಣೆಯು ಪ್ರತಿನಿಧಿಸುತ್ತದೆ.
ಡಾ. ಬಿಧಾನ್ ಅವರಿಗೆ 1961 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತ ರತ್ನ' ನೀಡಲಾಯಿತು. ಡಾ. ಬಿಧಾನ್ ಅವರು ಸಮಾಜದ ಕಲ್ಯಾಣಕ್ಕಾಗಿ ಅಪಾರ ಕೊಡುಗೆ ನೀಡಿದರು ಮತ್ತು ಭಾರತದಲ್ಲಿ ಅನೇಕ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಸಂಘ (IMA) ಈ ಎರಡು ಸಂಸ್ಥೆಗಳ ಸ್ಥಾಪನೆಯಲ್ಲಿ ಡಾ. ಬಿಧಾನ್ ಚಂದ್ರ ರಾಯ್ ಅವರ ಕೊಡುಗೆ ಅಪಾರ. ಡಾ. ಬಿಧಾನ್ ಚಂದ್ರ ರಾಯ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಈ ದಿನ ಸ್ಮರಿಸಲಾಗುತ್ತದೆ.
1991 ರಲ್ಲಿ ಭಾರತ ಸರ್ಕಾರವು ಪ್ರತಿ ವರ್ಷ ಜುಲೈ 1 ರಂದು ವೈದ್ಯರ ದಿನವನ್ನಾಗಿ ಆಚರಿಸಲು ಪ್ರಾರಂಭ ಮಾಡಿತು. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೈದ್ಯರ ದಿನ ಆಚರಿಸಲಾಗುತ್ತದೆ, ಆದರೆ ಈ ದಿನಾಚರಣೆಯನ್ನು ಆಚರಿಸುವ ದಿನಾಂಕಗಳು ಮಾತ್ರ ವಿಭಿನ್ನವಾಗಿವೆ.
ಈ ವರ್ಷ ನಮ್ಮ ದೇಶದಲ್ಲಿ, "ಕುಟುಂಬ ವೈದ್ಯರಿಗೆ ಮೊದಲ ನಮನ" ಎಂಬ ಘೋಷವಾಕ್ಯದೊಂದಿಗೆ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ವೈದ್ಯರು 'ಉದಾತ್ತ ವೃತ್ತಿ'ಯನ್ನು ಕೈಗೊಳ್ಳುವವರು. ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ಜೀವಗಳನ್ನು ಉಳಿಸಲು ಹಲವಾರು ತ್ಯಾಗಮಾಡುತ್ತಾರೆ. ಆದರೆ ನಾವು ಅವರನ್ನು ಎಷ್ಟು ಗೌರವಿಸುತ್ತೇವೆ? ಎಂಬುದು ಈ ವರ್ಷದ ಘೋಷವಾಕ್ಯಕ್ಕೆ ಪೂರಕವಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಯ ಬಗ್ಗೆ ನೋಡುವುದಾದರೆ ಇಂದು ಭಾರತವು ಈ ವಿಷಯದಲ್ಲಿ ಬಹಳ ಮುಂದೆ ಸಾಗಿದೆ ಮತ್ತು ತಾಂತ್ರಿಕವಾಗಿಯೂ ಮುಂದುವರೆದಿದೆ. ಆದಾಗ್ಯೂ, ನಮ್ಮ ದೇಶದಲ್ಲಿ ರೋಗಗಳು ಮತ್ತು ಆರೋಗ್ಯ ತುರ್ತುಪರಿಸ್ಥಿತಿಗಳ ಅನಿರೀಕ್ಷಿತ ಏರಿಕೆಯ ಕಾರಣದಿಂದ ವೈದ್ಯರ ಅಗತ್ಯವು ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜಗತ್ತು ತತ್ತರಿಸಿದಾಗ ಮತ್ತು ಸೋಂಕಿಗೆ ಒಳಗಾಗುವ ಜನರ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡುಬಂದಾಗ, ವೈದ್ಯರು ತಮ್ಮನ್ನೆ ತಾವು ಅಪಾಯಕ್ಕೆ ಒಡ್ಡಿಕೊಂಡು ಲಕ್ಷಾಂತರ ಜನರ ಜೀವಗಳನ್ನು ಉಳಿಸಲು ನಿರಂತರವಾಗಿ ಕೆಲಸ ಮಾಡಿದರು. ಮಾರಣಾಂತಿಕ ಕೋವಿಡ್-19 ವೈರಸ್‌ಗೆ ಚಿಕಿತ್ಸೆ ನೀಡುತ್ತ ಸಾವಿರಾರು ವೈದ್ಯರು ತಮ್ಮ ಪ್ರಾಣವನ್ನೇ ಕಳೆದುಕೊಂಡರು.
"ಕಳೆದ ವರ್ಷ ಭಾರತದಾದ್ಯಂತ 748 ವೈದ್ಯರು ಕೋವಿಡ್-19 ಗೆ ಬಲಿಯಾದರು. ನಂತರ ಬಂದ ಎರಡನೇ ಅಲೆಯಲ್ಲಿ 730 ವೈದ್ಯರು ಸಾವಿಗೀಡಾದರು." ಎಂದು ಐಎಂಎಯ ವೈದ್ಯರು ಹೇಳಿದ್ದಾರೆ.
ಆದ್ದರಿಂದ, ಈ ದಿನವು ವೈದ್ಯರಿಗೆ ಧನ್ಯವಾದ ಅರ್ಪಿಸಲು ಮತ್ತು ಅವರ ವೃತ್ತಿಯನ್ನು ಗೌರವಿಸಲು ಒಂದು ಅಪೂರ್ವ ಅವಕಾಶವಾಗಿದೆ. ಜೀವರಕ್ಷಕರಾದ ವೈದ್ಯ ಸಂಕುಲಕ್ಕೆ ನಮ್ಮದೂ ಒಂದು ಥ್ಯಾಂಕ್ಸ್ ಇರಲಿ.