ವಾರಣಾಸಿ(ಉತ್ತರ ಪ್ರದೇಶ): ದೇಶಾದ್ಯಂತ ಇಂದು ವೈದ್ಯರ ದಿನಾಚರಿಸಲಾಗಿದೆ. ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಸಾವಿರಾರು ಜನರ ಜೀವ ಕಾಪಾಡುವ ಕೆಲಸವನ್ನು ಅವರು ಮಾಡ್ತಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ವೈದ್ಯೆಯೋರ್ವರು ತಮ್ಮ ನರ್ಸಿಂಗ್ ಹೋಮ್ನಲ್ಲಿ ಜನಿಸುವ ಹೆಣ್ಣು ಮಕ್ಕಳ ಹೆರಿಗೆಗೆ ಯಾವುದೇ ರೀತಿಯ ಹಣ ಕಟ್ಟಿಸಿಕೊಳ್ಳಲ್ಲ. ಇದರ ಜೊತೆಗೆ ಅನೇಕ ಸಮಾಜಮುಖಿ ಕೆಲಸವನ್ನೂ ಅವರು ಮಾಡ್ತಿದ್ದಾರೆ.
ಸಮಾಜದಲ್ಲಿ ಇಂದಿಗೂ ಹೆಣ್ಣು ಮಕ್ಕಳು ಹೊರೆ ಎಂದು ಪರಿಗಣಿಸುವ ಜನರಿದ್ದಾರೆ. ಆದರೆ, ವಾರಾಣಸಿಯ ಡಾ. ಶಿಪ್ರಾಧಾರ್ ತಮ್ಮ ನರ್ಸಿಂಗ್ ಹೋಮ್ನಲ್ಲಿ ಹೆಣ್ಣು ಮಕ್ಕಳು ಜನ್ಮ ತಾಳಿದರೆ, ಸಿಹಿ ನೀಡಿ ಸಂಭ್ರಮಿಸುವರು. ಜೊತೆಗೆ ನಾರ್ಮಲ್ ಅಥವಾ ಸಿಸೇರಿಯನ್ ಆದರೂ ಯಾವುದೇ ರೀತಿಯ ಶುಲ್ಕ ಕಟ್ಟಿಸಿಕೊಳ್ಳಲ್ಲ.
ಡಾ. ಶಿಪ್ರಾ ಅವರ ಬಾಲ್ಯ ಅನೇಕ ಹೋರಾಟಗಳಿಂದ ಕೂಡಿತ್ತು. ಚಿಕ್ಕವಳಾಗಿದ್ದಾಗ ತಂದೆಯನ್ನು ಕಳೆದುಕೊಳ್ಳುತ್ತಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ತಾರತಮ್ಯ ಹೋಗಲಾಡಿಸಲು ಚಿಕ್ಕವರಾಗಿದ್ದಾಗಲೇ ಗಟ್ಟಿ ನಿರ್ಧಾರ ಮಾಡ್ತಾರೆ. 2000ರಲ್ಲಿ ಬನಾರಸ್ ವಿಶ್ವವಿದ್ಯಾಲಯದಿಂದ MD ಮುಗಿಸಿದ ಬಳಿಕ ನರ್ಸಿಂಗ್ ಹೋಮ್ ತೆರೆಯುತ್ತಾರೆ. ನರ್ಸಿಂಗ್ ಹೋಮ್ನಲ್ಲಿ ಹೆಣ್ಣು ಮಕ್ಕಳು ಹುಟ್ಟಿದಾಗ ಅನೇಕ ಕುಟುಂಬಗಳು ನಿರಾಸೆಗೊಳಗಾಗುವುದನ್ನು ಅವರು ಕಂಡಿದ್ದಾರೆ. ಅವರಲ್ಲಿರುವ ಹತಾಶ ಭಾವನೆ ಹೋಗಲಾಡಿಸಲು ನಾನು ಸಂಕಲ್ಪ ಮಾಡಿ, ಹೆಣ್ಣು ಮಗು ಹುಟ್ಟಿದರೆ ಅದನ್ನು ಹಬ್ಬದಂತೆ ಆಚರಣೆ ಮಾಡಲು ನಿರ್ಧರಿಸಿದ್ದೇನೆ ಎನ್ನುತ್ತಾರೆ.
ಇದರ ಜೊತೆಗೆ ಹೆರಿಗೆಗೋಸ್ಕರ ಯಾವುದೇ ರೀತಿಯಲ್ಲೂ ಚಿಕಿತ್ಸಾ ಹಣ ಪಡೆದುಕೊಳ್ಳಲ್ಲ. 2014ರಿಂದಲೂ ಆರಂಭವಾಗಿರುವ ಈ ಅಭಿಯಾನದಲ್ಲಿ ಇಲ್ಲಿಯವರೆಗೆ 500ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಜನನವಾಗಿದ್ದು, ಯಾವುದೇ ರೀತಿಯ ಶುಲ್ಕ ಪಡೆದುಕೊಂಡಿಲ್ಲ. ಇದರ ಜೊತೆಗೆ ನರ್ಸಿಂಗ್ ಹೋಮ್ನಲ್ಲೇ ಅನೇಕ ಹೆಣ್ಣು ಮಕ್ಕಳಿಗೆ ಉಚಿತವಾಗಿ ಪ್ರಾಥಮಿಕ ಶಿಕ್ಷಣ ಸಹ ನೀಡುತ್ತಿದ್ದು, ಅದಕ್ಕಾಗಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ.
ಬಡ ಮಹಿಳೆಯರಿಗೋಸ್ಕರ ಧಾನ್ಯ ಬ್ಯಾಂಕ್ ಆರಂಭಿಸಿದ್ದು, ಇದರ ಅಡಿಯಲ್ಲಿ ಪ್ರತಿ ತಿಂಗಳ ಮೊದಲ ದಿನ 40 ಬಡ ವಿಧವೆಯರು ಮತ್ತು ಅಸಹಾಯಕ ಮಹಿಳೆಯರಿಗೆ ಆಹಾರ ಧಾನ್ಯ ಒದಗಿಸುತ್ತಾರೆ. ಇದರಲ್ಲಿ ತಲಾ 10 ಕೆಜಿ ಗೋಧಿ ಮತ್ತು 5 ಕೆಜಿ ಅಕ್ಕಿ ಸೇರಿಕೊಂಡಿದೆ. ಜೊತೆಗೆ ಹೋಳಿ ಹಬ್ಬ, ದೀಪಾವಳಿ ಸಂದರ್ಭಗಳಲ್ಲಿ ಎಲ್ಲ ಮಹಿಳೆಯರಿಗೆ ಬಟ್ಟೆ, ಉಡುಗೊರೆ ಜೊತೆಗೆ ಸಿಹಿತಿಂಡಿ ನೀಡುತ್ತಾರೆ. ಇವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಸಿದ್ದು, 2019ರಲ್ಲಿ ವಾರಾಣಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.