ನವದೆಹಲಿ: ದೇಶಕ್ಕಾಗಿ ಸಿಯಾಚಿನ್ ಹಿಮನದಿಯನ್ನು ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ಕರ್ನಲ್ ನರೇಂದ್ರ ಬುಲ್ ಕುಮಾರ್ ಅವರು ದೆಹಲಿಯ ಆರ್ಮಿ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮತ್ತು ಇವರು ವಯೋ ಸಹಜ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಪರ್ವತಾರೋಹಣ ದಂಡಯಾತ್ರೆಯ ಭಾಗವಾಗಿ ಹಿಮನದಿಯ ಮೇಲೆ ಇಳಿದ ಮೊದಲ ಅಧಿಕಾರಿಗಳಲ್ಲಿ ಒಬ್ಬರಾದ ಇವರು, ಸಿಯಾಚಿನ್ ಹಿಮನದಿಯ ಕಾರ್ಯತಂತ್ರದ ಮಹತ್ವದ ಬಗ್ಗೆ ಭಾರತದ ಮಿಲಿಟರಿಗೆ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಪರೇಷನ್ ಮೇಘದೂತ್
ಸಿಯಾಚಿನ್ ಗ್ಲೇಸಿಯರ್ ಪಾಯಿಂಟ್ ಎನ್ಜೆ 9842ರ ಉತ್ತರದಲ್ಲಿದೆ, ಭಾರತ ಮತ್ತು ಪಾಕಿಸ್ತಾನ ನಡುವಿನ 1949 ರ ಕರಾಚಿ ಒಪ್ಪಂದವು ಪಾಯಿಂಟ್ ಎನ್ಜೆ 9842 ರ ಉತ್ತರದ ಪ್ರದೇಶಗಳನ್ನು ಅಸ್ಪಷ್ಟವಾಗಿ ಗುರುತಿಸಿದೆ. ಅದಾಗ್ಯೂ ಪಾಕಿಸ್ತಾನದ ದುಷ್ಕೃತ್ಯದ ಉದ್ದೇಶಗಳನ್ನು ಗ್ರಹಿಸಿದ ಭಾರತ, ಏಪ್ರಿಲ್ 13, 1984 ರಂದು ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಿ ಹಿಮನದಿಯನ್ನು ಆಕ್ರಮಿಸಿಕೊಂಡಿತು.
ನರೇಂದ್ರ ಕುಮಾರ್ ಒಬ್ಬ ಸೈನಿಕ - ಪರ್ವತಾರೋಹಿ, 1978 ರಲ್ಲಿ 46 ನೇ ವಯಸ್ಸಿನಲ್ಲಿ ಭಾರತೀಯ ಸೈನ್ಯಕ್ಕಾಗಿ ತೆರಾಮ್ ಕಾಂಗ್ರಿ, ಸಿಯಾಚಿನ್ ಗ್ಲೇಸಿಯರ್ ಮತ್ತು ಸಾಲ್ಟೋರೊ ಶ್ರೇಣಿಯಲ್ಲಿ ಅವರು ಕೈಗೊಂಡ ಪರ್ವತಾರೋಹಣಕ್ಕೆ ಹೆಸರುವಾಸಿಯಾಗಿದ್ದಾರೆ. ಇದು ಹಿಮನದಿಯನ್ನು ರಹಸ್ಯವಾಗಿ ಸೆರೆಹಿಡಿಯುವ ಪಾಕಿಸ್ತಾನದ ಉದ್ದೇಶದ ಬಗ್ಗೆ ಭಾರತೀಯ ಸೈನ್ಯಕ್ಕೆ ಅರಿವು ಮೂಡಿಸಿತು.
ಓದಿ: 121 ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನ
ಕುಮಾರ್ ಆ ದಂಡಯಾತ್ರೆ ಕೈಗೊಳ್ಳದಿದ್ದರೆ, ಸಿಯಾಚಿನ್ ಹಿಮನದಿ ಇವತ್ತು ಪಾಕಿಸ್ತಾನಕ್ಕೆ ಸೇರುತ್ತಿತ್ತು. ಸುಮಾರು 10,000 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಏಳು ಪರ್ವತ ಶ್ರೇಣಿಗಳನ್ನು ದಾಟಿದ ಕುಮಾರ್ ನಿಜಕ್ಕೂ ಅಚ್ಚರಿಯ ಸಾಧನೆ ಮಾಡಿದ್ದಾರೆ.
ಕುಮಾರ್ ಅವರು, 1933 ರಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಿಸಿದರು. ನಂತರ ಇವರು ಕಮೋವಾನ್ ರೆಜಿಮೆಂಟ್ಗೆ ಸೇರ್ಪಡೆಯಾಗಿದ್ದರು. ಇವರ ರಹಸ್ಯ ಕಾರ್ಯಾಚರಣೆಯ ವರದಿ ಇಂದಿರಾಗಾಂಧಿಯವರ ಆಪರೇಷನ್ ಮೇಘದೂತ್ಗೆ ಸಹಾಯಕವಾಯಿತು.
ಪಾಕಿಸ್ತಾನ ಸೈನ್ಯವನ್ನು ಸೋಲಿಸುವ ಉದ್ದೇಶದಿಂದಾಗಿ ಸಿಯಾಚಿನ್ ಹಿಮನದಿಯನ್ನು ವಶಕ್ಕೆ ಪಡೆಯಲಾಗಿತ್ತು. ಇಂದಿಗೂ ಕೂಡಾ ಭಾರತ ಹಾಗೂ ಪಾಕಿಸ್ತಾನವನ್ನು ಬೇರ್ಪಡಿಸುವ 109 ಕಿ.ಮೀ ಆಕ್ಟುವಲ್ ಗ್ರೌಂಡ್ ಪೋಶಿಷನ್ ಲೈನ್ ಇದ್ದು ಇದು ಇವರ ಸಾಧನೆಯನ್ನು ನೆನಪಿಸುತ್ತದೆ.
ಪ್ರಶಸ್ತಿಗಳು:
- 1965 ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು.
- ಪರಮ ವಿಶಿಷ್ಟ ಸೇವಾ ಪದಕ ಗೌರವ, ಕೀರ್ತಿ ಚಕ್ರ ಹಾಗೂ ಅತಿ ವಿಶಿಷ್ಟ ಸೇವಾ ಪದಕವನ್ನು ಅವರಿಗೆ ನೀಡಿ ಗೌರವಿಸಲಾಗಿತ್ತು.