ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಾರದಾ ಸ್ಟಿಂಗ್ ಟೇಪ್ ಪ್ರಕರಣದಲ್ಲಿ ಸಿಬಿಐ ಬಂಧಿಸಿರುವ ಟಿಎಂಸಿ ಮುಖಂಡರಿಗೆ ಜಾಮೀನು ನೀಡಿದುದರ ವಿರುದ್ಧ ದಾಖಲಿಸಿದ ಪ್ರಕರಣ ವಿಚಾರಣೆಯನ್ನು ಕೋಲ್ಕತ್ತಾ ಹೈಕೋರ್ಟ್ ಅನಿವಾರ್ಯ ಸಂದರ್ಭಗಳಿಂದಾಗಿ ಮುಂದೂಡಿದೆ.
ಜೈಲಿನಲ್ಲಿರುವ ನಾಯಕರ ಬೆಂಬಲಿಗರ ಒತ್ತಡವನ್ನು ಉಲ್ಲೇಖಿಸಿ ಜಾಮೀನು ಅರ್ಜಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸಲು ಕೇಂದ್ರ ತನಿಖಾ ದಳದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜೀತ್ ಬ್ಯಾನರ್ಜಿ ಒಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.
ಸಿಬಿಐ ಸಲ್ಲಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮೊಲೊಯ್ ಘಟಕ್ ಅವರನ್ನು ಪಕ್ಷಗಳನ್ನಾಗಿ ಮಾಡಲಾಗಿದೆ. "ಅನಿವಾರ್ಯ ಸಂದರ್ಭಗಳಿಂದಾಗಿ, ಮೊದಲ ವಿಭಾಗದ ನ್ಯಾಯಪೀಠವು ಇಂದು ಸಭೆ ಸೇರುವುದಿಲ್ಲ" ಎಂದು ಕೋಲ್ಕತ್ತಾ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಣೆಯ ಮೂಲಕ ತಿಳಿಸಿದೆ.
ಪಶ್ಚಿಮ ಬಂಗಾಳ ಸಚಿವರಾದ ಸುಬ್ರತಾ ಮುಖರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಮತ್ತು ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ ಅವರಿಗೆ ಜಾಮೀನು ನೀಡುವ ಸಿಬಿಐ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಸೋಮವಾರ ರಾತ್ರಿ ತಡೆ ಹಿಡಿದಿತ್ತು.
ವಿಶೇಷ ನ್ಯಾಯಾಲಯದ ಆದೇಶವನ್ನು ತಡೆ ಹಿಡಿಯುವುದು ಸೂಕ್ತವೆಂದು ಪರಿಗಣಿಸಲಾಗಿದೆ ಮತ್ತು "ಮುಂದಿನ ಆದೇಶದವರೆಗೆ ಆರೋಪಿತ ವ್ಯಕ್ತಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಿಕೊಳ್ಳಬೇಕು" ಎಂದು ವಿಭಾಗೀಯ ಪೀಠ ಹೇಳಿದೆ.