ನಂದಿಗ್ರಾಮ: ಕೇವಲ ಪ.ಬಂಗಾಳ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿ ವರ್ಸಸ್ ಸುವೇಂದು ಅಧಿಕಾರಿ ಎಂಬ ಪರಿಸ್ಥಿತಿ ಉದ್ಭವಿಸಿದೆ.
ಪುರ್ಬಾ ಮದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭೆ ಕ್ಷೇತ್ರವು ಇಂದು ಘಟಾನುಘಟಿ ನಾಯಕರ ಭವಿಷ್ಯ ನಿರ್ಧರಿಸುತ್ತದೆ.
ನಂದಿಗ್ರಾಮಕ್ಕೆ ಬಂಗಾಳದ ರಾಜಕೀಯದಲ್ಲಿ ವಿಶೇಷ ಸ್ಥಾನವಿದೆ. 2007ರಲ್ಲಿ ಎಡ ಸರ್ಕಾರದ ವಿರುದ್ಧ ಮಮತಾ ತನ್ನ ಅತಿದೊಡ್ಡ ರಾಜಕೀಯ ಆಂದೋಲನ ಪ್ರಾರಂಭಿಸಿದ ಸ್ಥಳವಿದು. ಈ ಚಳವಳಿಯ ನೇತೃತ್ವವನ್ನು ಅಧಿಕಾರಿ ಅವರೇ ವಹಿಸಿಕೊಂಡಿದ್ದರು. ಒಂದು ಕಾಲದಲ್ಲಿ ಇವರು ಮಮತಾರ ವಿಶ್ವಾಸಾರ್ಹರಾಗಿ ಗುರುತಿಸಿಕೊಂಡಿದ್ದರು. ಆದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಟಿಎಂಸಿ ತೊರೆದು ಕಮಲ ಮುಡಿದರು.
ಅಧಿಕಾರಿ ಕುಟುಂಬಕ್ಕೆ ಈ ಕ್ಷೇತ್ರ ಭದ್ರಕೋಟೆಯಾಗಿದೆ. ಇಂಡಿಯಾ ಟಿವಿ-ಪೀಪಲ್ಸ್ ಪಲ್ಸ್ ಎಕ್ಸಿಟ್ ಸಮೀಕ್ಷೆಯ ಪ್ರಕಾರ, ಸುವೆಂದು ಅಧಿಕಾರಿ ನಂದಿಗ್ರಾಮ್‌ನಲ್ಲಿ ಮಮತಾ ಅವರನ್ನು ದಿಗ್ಭ್ರಮೆಗೊಳಿಸಬಹುದು ಎಂದಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗುವ ಮೊದಲು 2016ರಲ್ಲಿ ತೃಣಮೂಲ ಟಿಕೆಟ್‌ನಿಂದ ಕಣಕ್ಕಿಳಿದ ಸುವೇಂದು ಅತ್ಯಧಿಕ ಮತಗಳಿಂದ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಸರಿ ಬ್ರಿಗೇಡ್ ಸೇರಿದ ಅಧಿಕಾರಿ, 50,000ಕ್ಕೂ ಹೆಚ್ಚು ಮತಗಳಿಂದ ಮಮತಾರನ್ನು ಸೋಲಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಏಪ್ರಿಲ್ 1ರಂದು ನಡೆದ ಮತದಾನದಲ್ಲಿ ಶೇ 88ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.