ಒಡಿಶಾ: ಇಲ್ಲಿನ ಮಯೂರ್ಭಂಜ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರು ನೆಲದ ಮೇಲೆ ಮಲಗಿರುವ ವಿಡಿಯೋಗಳು ವೈರಲ್ ಆಗಿವೆ. ರೋಗಿಗಳ ಮೈಮೇಲೆ ಬಟ್ಟೆಗಳು ಸಹ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬರಿಪಾಡ ಪಟ್ಟಣದ ಬಂಕಿಶೋಲಾ ಪ್ರದೇಶದ ಕಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಶೌಚಾಲಯದ ಪಕ್ಕದಲ್ಲಿ ಅನ್ನದ ಪ್ಲೇಟ್ಗಳನ್ನು ಬಿಸಾಡುವ ಜಾಗದಲ್ಲಿ ರೋಗಿಗಳ ಹಾಸಿಗೆಗಳು ಇರುವುದು ವಿಡಿಯೋದಲ್ಲಿ ಕಾಣುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಸಂಬಂಧಿಯನ್ನು ಭೇಟಿ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಇವು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಧಿಕಾರಿಗಳ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಯೂರ್ಭಂಜ್ ಹೆಚ್ಚುವರಿ ವಿಭಾಗೀಯ ವೈದ್ಯಕೀಯ ಅಧಿಕಾರಿ ಎನ್.ಆರ್. ದಾಸ್ ಅವರು ಘಟನೆಯ ಬಗ್ಗೆ ತಿಳಿದೇ ಇಲ್ಲವೆಂದು ಎಂದು ಹೇಳಿದ್ದಾರೆ. ಆದರೆ, ಘಟನೆ ಕುರಿತು ತುರ್ತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೀತ್ ಭರದ್ವಾಜ್ ತಿಳಿಸಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಡಿಸಿ ವಿನೀತ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ರೋಗಿಗಳಿಗೆ ನೀಡುವ ಚಿಕಿತ್ಸೆಯ ವಿಧಾನವನ್ನು ಪರೀಕ್ಷಿಸಲಾಯಿತು. ವಾರ್ಡ್‌ಗಳಲ್ಲಿ ರೋಗಿಗಳೊಂದಿಗೆ ಮಾತನಾಡಿದರು. ಆಸ್ಪತ್ರೆಯ ಪ್ರತಿಯೊಬ್ಬ ರೋಗಿಯೂ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.