ನಬರಂಗಪುರ (ಒಡಿಶಾ): ಕೇಂದ್ರ ಸರ್ಕಾರ ಘೋಷಿಸಿರುವ ಅಲ್ಪಾವಧಿಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದೆ. ರೈಲಿಗೆ ಬೆಂಕಿ, ಬಸ್ಸಿಗೆ ಕಲ್ಲು ಎಸೆತ, ವಾಹನಗಳನ್ನು ಸುಟ್ಟುಹಾಕುವುದು, ಸರ್ಕಾರಿ ಕಚೇರಿಗಳ ಮೇಲೆ ದಾಂಧಲೆ, ಮೂಲ ಸೌಕರ್ಯಗಳನ್ನು ಧ್ವಂಸಗೊಳಿಸುವುದು ಸೇರಿದಂತೆ ಪ್ರತಿಭನಾಕಾರರು ವಿವಿಧ ರೂಪದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಗ್ನಿಪಥ್ ಯೋಜನೆ ವಿರುದ್ಧ ವಿನೂತನ ಪ್ರತಿಭಟನೆಯಲ್ಲಿ, ಸೇನಾ ಉದ್ಯೋಗದ ಆಕಾಂಕ್ಷಿ ನರೇಶ್ ಬಿಸ್ವಾಸ್ (23) ಅವರು ನಬರಂಗಪುರದ ಜಿಲ್ಲಾಧಿಕಾರಿ ಕಚೇರಿಯಿಂದ ಉಮರ್‌ಕೋಟೆ ಬಿಜು ಪಟ್ನಾಯಕ್ ಕ್ರೀಡಾಂಗಣದವರೆಗೆ 60 ಕಿ.ಮೀ ಓಡಿದರು. ಶುಕ್ರವಾರದಂದು 5 ಗಂಟೆ 26 ನಿಮಿಷಗಳಲ್ಲಿ ತಮ್ಮ ಓಟವನ್ನು ಪೂರ್ಣಗೊಳಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನರೇಶ್ ಬಿಸ್ವಾಸ್ ಮಾತನಾಡಿ, ಸುಮಾರು 20 ಯುವಕರು ತನ್ನೊಂದಿಗೆ ದೇಶ ಸೇವೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಕೇವಲ ನಾಲ್ಕು ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಈ ತಯಾರಿ ನಡೆಸುತ್ತಿಲ್ಲ. ನಾನು ನನಗಾಗಿ ಮಾತ್ರವಲ್ಲದೇ ರಕ್ಷಣಾ ಸೇವೆ ಸಲ್ಲಿಸಲು ಕಠಿಣ ತಯಾರಿ ನಡೆಸುತ್ತಿರುವ ನನ್ನ ಸ್ನೇಹಿತರಿಗಾಗಿಯೂ ಚಿಂತಿಸುತ್ತಿದ್ದೇನೆ. ಯೋಜನೆಯ ಸುದ್ದಿ ಕೇಳಿದ ನಂತರ ನಾನು ಯೋಗ್ಯ ರೀತಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದೆ. ಹಾಗಾಗಿ 60 ಕಿ.ಮೀ ಓಡುವ ಮೂಲಕ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿರುವೆ ಎಂದು ತಿಳಿಸಿದರು. ಅಲ್ಲದೇ ಅಗ್ನಿಪ್ ಯೋಜನೆಯನ್ನು ಕೇಂದ್ರ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಬಿಹಾರ್- ಯುಪಿಯಲ್ಲಿ ಬಸ್ - ಲಾರಿಗೆ ಬೆಂಕಿ: ತಮಿಳುನಾಡು -ಪಂಜಾಬ್ನಲ್ಲಿ ತೀವ್ರಗೊಂಡ ಪ್ರತಿಭಟನೆ!