ನವದೆಹಲಿ : ನೆರೆಯ ರಾಷ್ಟ್ರ ಮ್ಯಾನ್ಮಾರ್ನಲ್ಲಿರುವ ಭಾರತ ವಿರೋಧಿ ಸಂಘಟನೆಗಳ ವಿರುದ್ಧ ಅಲ್ಲಿನ ಸೇನೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಇದು ಭಾರತ ಮತ್ತು ಮ್ಯಾನ್ಮಾರ್ ಸಂಬಂಧಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ.
ಈ ಹಿಂದೆ ಅಸ್ಸಾಂ ರೈಫಲ್ಸ್ ಪಡೆಯ ಕರ್ನಲ್ ಮತ್ತು ಅವರ ಕುಟುಂಬದ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಆರ್ಮಿಯಂತಹ ಗುಂಪುಗಳ ವಿರುದ್ಧ ಮ್ಯಾನ್ಮಾರ್ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಮ್ಯಾನ್ಮಾರ್ ಸೇನೆಯೊಡನೆ ಭಾರತೀಯ ಏಜೆನ್ಸಿಗಳು ಸಂಪರ್ಕದಲ್ಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆಯು ಮ್ಯಾನ್ಮಾರ್ನಲ್ಲಿರುವ ಮಿಲಿಟರಿ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಇತ್ತೀಚೆಗೆ ಭಾರತ ವಿರೋಧಿ ಸಂಘಟನೆಯ ಐವರು ಬಂಡುಕೋರರನ್ನು ಮ್ಯಾನ್ಮಾರ್ ಭಾರತಕ್ಕೆ ಹಸ್ತಾಂತರ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಮ್ಯಾನ್ಮಾರ್ ಸೇನೆಯ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಗುಂಪುಗಳಿಗೆ ಉಂಟಾದ ಹಾನಿ, ಸಾವು-ನೋವುಗಳ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ನವೆಂಬರ್ 13ರಂದು ಮಣಿಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಸ್ಸಾಂ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಸೇರಿದಂತೆ ಐವರು ಸಿಬ್ಬಂದಿ ಹುತಾತ್ಮರಾಗಿದ್ದರು.
ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಮತ್ತು 8 ವರ್ಷದ ಮಗ ಮತ್ತು ನಾಲ್ವರು ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿ ನಡೆಸಿದ ಭಯೋತ್ಪಾದಕ ಸಂಘಟನೆಯ ವಿರುದ್ಧವೂ ಮ್ಯಾನ್ಮಾರ್ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಆಸ್ಪತ್ರೆಯೊಂದರ ಬಯೋ ಗ್ಯಾಸ್ ಯುನಿಟ್ನಲ್ಲಿ ಭ್ರೂಣದ 11 ತಲೆಬುರುಡೆ, ಮೂಳೆಗಳು ಪತ್ತೆ