ನವದೆಹಲಿ: ಭಾರತ್ ಜೋಡೋ ಯಾತ್ರೆಯ ಉದ್ದೇಶದ ಕುರಿತು ಪ್ರಶ್ನೆ ಎತ್ತಿರುವ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯೊಂದನ್ನು ತೆರೆಯುತ್ತಿರುವೆ ಎಂದಿದ್ದಾರೆ. ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ, ನಾನು ಈ ಯಾತ್ರೆಯನ್ನು ಏಕೆ ಮಾಡುತ್ತಿದ್ದೇನೆ ಎಂದು ಕೇಳುವ ಬಿಜೆಪಿ ನಾಯಕರಿಗೆ ಇದು ನನ್ನ ಪ್ರತಿಕ್ರಿಯೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ಈಗ 100 ದಿನಗಳಿಂದ ನಡೆಯುತ್ತಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ನಂತರ ನಾವು ಈಗ ರಾಜಸ್ಥಾನದಲ್ಲಿದ್ದೇವೆ. ನಾನು ದಾರಿಯುದ್ದಕ್ಕೂ ಹಲವಾರು ಆತ್ಮೀಯ ಸ್ನೇಹಿತರನ್ನು ಸಹ ಭೇಟಿಯಾಗುತ್ತಿದ್ದೇನೆ. ಸಾಮಾನ್ಯವಾಗಿ ಅವರು ಬಿಜೆಪಿ ಕಚೇರಿಯ ಮೇಲೆ ನಿಂತಿರುತ್ತಾರೆ. ನಾನು ಹಾದು ಹೋಗುವಾಗ ಅವರಿಗೆ ಕೈ ಬೀಸಿ ಅಭಿನಂದಿಸುತ್ತೇನೆ. ದ್ವೇಷದ ಮಾರುಕಟ್ಟೆಯಲ್ಲಿ, ನಾನು ಪ್ರೀತಿಯ ಅಂಗಡಿಯನ್ನು ತೆರೆಯುತ್ತೇನೆ. ನೀವು ನನ್ನನ್ನು ದ್ವೇಷಿಸುತ್ತೀರಿ, ನೀವು ನನ್ನನ್ನು ನಿಂದಿಸುತ್ತೀರಿ ... ನಿಮ್ಮ ಅಂಗಡಿಯು ದ್ವೇಷದಿಂದ ಕೂಡಿದೆ, ಆದರೆ ನನ್ನ ಅಂಗಡಿಯು ಪ್ರೀತಿಯದ್ದಾಗಿದೆ ಎಂದರು.
ಇದು ಕೇವಲ ನನ್ನ ಅಂಗಡಿಯಲ್ಲ, ಇದು ಇಡೀ ಸಂಘಟನೆಯ ಅಂಗಡಿಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧಿ, ನೆಹರು, ಪಟೇಲ್, ಅಂಬೇಡ್ಕರ್, ಆಜಾದ್ ಎಲ್ಲರೂ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆದಿದ್ದರು. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯವಂತೆ ನಾನು ಬಿಜೆಪಿ ನಾಯಕರಿಗೂ ವಿನಂತಿಸುತ್ತೇನೆ. ನಮ್ಮ ಧರ್ಮ, ನಮ್ಮ ದೇಶ ಪ್ರೀತಿಯಿಂದ ನಿರ್ಮಾಣವಾಗಿದೆಯೇ ಹೊರತು ದ್ವೇಷದಿಂದಲ್ಲ, ಅದಕ್ಕಾಗಿಯಾದರೂ ನೀವು ಇದನ್ನು ಮಾಡಲೇಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರದ ಆಡಳಿತವನ್ನು ರಾಹುಲ್ ಶ್ಲಾಘಿಸಿದರು. ಬಹುಶಃ ದೇಶದ ಬಡವರಿಗಾಗಿ ಉತ್ತಮ ಯೋಜನೆಗಳು ರಾಜಸ್ಥಾನದಲ್ಲಿ ಕಾಣಸಿಗುತ್ತವೆ ಎಂದು ರಾಹುಲ್ ಗಾಂಧಿ ಹೇಳಿದರು.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಈಗ ರಾಜಸ್ಥಾನ ಹೀಗೆ ಎಂಟು ರಾಜ್ಯಗಳಲ್ಲಿ ಸಂಚರಿಸಿದೆ. ಯಾತ್ರೆ ಶುಕ್ರವಾರದಂದು 100 ದಿನ ಪೂರೈಸಿದೆ.
ಇದನ್ನೂ ಒದಿ: ಭಾರತ್ ಜೋಡೋ ಯಾತ್ರೆ: ಸಹೋದರಿಯೊಂದಿಗೆ ದೀರ್ಘ ಸಂವಾದ ನಡೆಸಿದ ರಾಹುಲ್ ಗಾಂಧಿ