ನವದೆಹಲಿ: ಮಿಜೋರಾಂನಲ್ಲಿ ಭಾಷಾ ತೊಡಕೊಂದು ಕಾಣಿಸಿಕೊಂಡಿದೆ. ಮಿಜೋರಾಂ ಸಿಎಂ ಜೋರಾಮ್ಥಾಂಗಾ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಬದಲಾಯಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ನಮ್ಮ ರಾಜ್ಯದ ಸಚಿವರಿಗೆ ಹಿಂದಿ ಅರ್ಥವಾಗುವುದಿಲ್ಲ. ಕೆಲವು ಸಚಿವರಿಗೆ ಇಂಗ್ಲೀಷೂ ಬರುವುದಿಲ್ಲ. ಸ್ಥಳೀಯವಾಗಿ ಮಾತನಾಡುವ ಮಿಜೋ ಭಾಷೆ ಬರುವವರನ್ನು ಸರ್ಕಾರದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಎಂದು ಸಿಎಂ ಜೋರಾಮ್ಥಾಂಗಾ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ರೇಣು ಶರ್ಮಾ ಅವರನ್ನು ಮಿಜೋರಾಂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿಎಂ ಮಿಜೋ ಭಾಷೆಯಲ್ಲಿ ಕೆಲಸ ಮಾಡುವ ಜ್ಞಾನವಿಲ್ಲದ ಅವರನ್ನು ತಕ್ಷಣ ಬದಲಾಯಿಸಲು ಕೇಂದ್ರ ಸರ್ಕಾರದ ಆದೇಶಿಸಬೇಕು ಎಂದಿದ್ದಾರೆ.
'ಸ್ನೇಹ' ಪ್ರಸ್ತಾಪ:
ನಾನು ಮೊದಲಿನಿಂದಲೂ ಎನ್ಡಿಎ ಜೊತೆಯಲ್ಲಿಯೇ ಇದ್ದೇನೆ. ಹಲವಾರು ರಾಜ್ಯಗಳಲ್ಲಿ ಒಂದು ಮೈತ್ರಿಕೂಟದಿಂದ ಮತ್ತೊಂದು ಮೈತ್ರಿಕೂಟಕ್ಕೆ ಪಲಾಯನ ಮಾಡಿದರೂ ನಾನು ಎನ್ಡಿಎ ಮೈತ್ರಿಕೂಟದಲ್ಲಿಯೇ ಇದ್ದೇನೆ. ಈಶಾನ್ಯ ರಾಜ್ಯಗಳಲ್ಲಿ ಮಿಜೋರಾ ರಾಜ್ಯ ಮಾತ್ರ ಎನ್ಡಿಎನೊಂದಿಗೆ ನಂಬಿಕಸ್ಥ ಸ್ನೇಹಿತನಾಗಿದೆ. ಇದರಿಂದ ನಮ್ಮ ಮನವಿಯನ್ನು ನೀವು ಪರಿಗಣಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಅಮಿತ್ ಶಾಗೆ ಬರೆದ ಪತ್ರದಲ್ಲಿ ಮಿಜೋರಾಂ ಸಿಎಂ ಒತ್ತಾಯಿಸಿದ್ದಾರೆ.
ಅಪಹಾಸ್ಯ ಮಾಡ್ತಾರೆ:
ನೀವು ಹೊಸ ಮುಖ್ಯ ಕಾರ್ಯದರ್ಶಿಯನ್ನು ಆಯ್ಕೆ ಮಾಡದಿದ್ದರೆ ಎನ್ಡಿಎಗೆ ನಿಷ್ಠೆಯಿಂದಿರುವ ಕಾರಣದಿಂದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ನನ್ನನ್ನು ಅಪಹಾಸ್ಯ ಮಾಡುತ್ತಿವೆ ಎಂದು ಮಿಜೋರಾಂ ಸಿಎಂ ಪತ್ರದಲ್ಲಿ ಹೇಳಿಕೊಂಡಿದ್ದು, ಮಿಜೋ ಭಾಷೆ ಗೊತ್ತಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಜೆ.ಸಿ.ರಾಮ್ಥಾಂಗಾ ಅವರಿಗೇ ಬಡ್ತಿ ನೀಡಬೇಕೆಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 'ಬ್ರಾಹ್ಮಣ, ಬನಿಯಾ ಸಮುದಾಯ ನನ್ನ ಜೇಬಿನಲ್ಲಿದ್ದಾರೆ': ಮುರಳೀಧರ್ ರಾವ್ ವಿವಾದ