ಜೈಪುರ: ಕೊರೊನಾ ಅಬ್ಬರದಿಂದಾಗಿ ಸಂಭವಿಸುತ್ತಿರುವ ಅಕಾಲಿಕ ಮರಣಗಳು ಎಷ್ಟೋ ಜನರನ್ನು ಅಸಹಾಯಕರನ್ನಾಗಿ ಮಾಡಿವೆ. ಇದೇ ವೇಳೆ, ಕೈಲಾಗದವರ ಸಹಾಯಕ್ಕೆ ಎಷ್ಟೋ ಹೃದಯಗಳು ಮಿಡಿಯುತ್ತಿವೆ. ಅದೇ ರೀತಿ ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರ ಮಾಡಲಾಗದೇ ಪರದಾಡುತ್ತಿದ್ದ ಅಸಹಾಯಕ ಹೆಣ್ಣುಮಕ್ಕಳಿಗೆ ಮುಸ್ಲಿಂ ಶಾಸಕರೊಬ್ಬರು ನೆರವಾಗಿದ್ದಾರೆ.
ಶಾಸಕ ಅಮೀನ್ ಕಾಗ್ಜಿ ತನ್ನ ಅಣ್ಣನಿಗೆ ಕೊರೊನಾ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ, ಆಸ್ಪತ್ರೆ ಆವರಣದಲ್ಲಿ ಇಬ್ಬರು ಹೆಣ್ಣುಮಕ್ಕಳು ಅಳುತ್ತಾ ಕೂತಿದ್ದರು. ಅವರ ಬಳಿ ತೆರಳಿ ಕಾರಣ ವಿಚಾರಿಸಿದಾಗ, ತಮ್ಮ ತಂದೆ ಕೊರೊನಾದಿಂದ ಮೃತಪಟ್ಟಿರುವುದಾಗಿಯೂ, ತಾಯಿಯನ್ನೂ ಸಹ ಇದೇ ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ತಂದೆಯ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋಗಲು ಆ್ಯಂಬುಲೆನ್ಸ್ ಸಿಗುತ್ತಿಲ್ಲ, ಸಹಾಯ ಮಾಡಲು ಯಾರೂ ಇಲ್ಲ ಎಂದು ಆ ಹೆಣ್ಣು ಮಕ್ಕಳು ಅಳಲು ತೋಡಿಕೊಂಡಿದ್ದಾರೆ. ಇದನ್ನು ಕೇಳಿ ಭಾವುಕರಾದ ಶಾಸಕ ಅಮೀನ್ ತಕ್ಷಣವೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಮೋಕ್ಷ ಧಾಮ್ ಸ್ಮಶಾನಕ್ಕೆ ತಾವು ತೆರಳಿ, ತಾವೇ ಮುಂದೆ ನಿಂತು ವಿಧಿ - ವಿಧಾನ ಪೂರೈಸಿ ಮೃತವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ನಂತರ ಆ ನೊಂದ ಹೆಣ್ಣುಮಕ್ಕಳಿಗೆ ಅಗತ್ಯ ಸಹಾಯ ಹಾಗೂ ಜೀವನೋಪಾಯಕ್ಕೆ ಮಾರ್ಗ ಕಲ್ಪಿಸುವುದಾಗಿ ಲಿಖಿತ ಭರವಸೆ ಸಹ ನೀಡಿದ್ದಾರೆ. ಶಾಸಕ ಅಮೀನ್ ಕೂಡ ಈ ಹಿಂದೆ ಎರಡು ಬಾರಿ ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಸದ್ಯ ಆ ಹೆಣ್ಣುಮಕ್ಕಳಿಗೆ ಇವರು ಸಹಾಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.