ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯದ ಮುಸ್ಲಿಂ ಸಮುದಾಯಕ್ಕೆ ಸೇರಿ ವಿದ್ಯಾರ್ಥಿನಿಯೊಬ್ಬರು ಎಂಎ ಸಂಸ್ಕೃತದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ, ಏಕಕಾಲಕ್ಕೆ ಐದು ಪದಕಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಗಜಾಲಾ ಎಂಬ ಮುಸ್ಲಿಂ ವಿದ್ಯಾರ್ಥಿನಿ ಈ ದಾಖಲೆ ಬರೆದಿದ್ದು, ಲಖನೌ ವಿಶ್ವವಿದ್ಯಾಲಯದ ಡೀನ್ ಫ್ರೊ.ಶಶಿ ಶುಕ್ಲಾ ಅವರು ವಿದ್ಯಾರ್ಥಿನಿಗೆ ಪದಕ ಪ್ರದಾನ ಮಾಡಿದ್ದಾರೆ. ಕೇವಲ ಸಂಸ್ಕೃತ ಮಾತ್ರವಲ್ಲದೇ ಇಂಗ್ಲಿಷ್, ಹಿಂದಿ, ಉರ್ದು, ಅರೇಬಿಕ್ ಭಾಷೆಗಳಲ್ಲೂ ಗಜಾಲಾ ಪ್ರಾವೀಣ್ಯತೆ ಹೊಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಗಜಾಲಾ ತಂದೆ ತೀರಿಕೊಂಡ ನಂತರ ಶಾದಾಬ್ ಮತ್ತು ನಯಾಬ್ ಎಂಬ ಸಹೋದರರ ಆಶ್ರಯದಲ್ಲಿ ಗಜಾಲಾ ಬೆಳೆದಿದ್ದಾರೆ. ಗಜಾಲಾ ಅವರ ಸಹೋದರರು ಚಿಕ್ಕ ವಯಸ್ಸಿನಿಂದಲೇ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಾರೆ. ತಾಯಿ ನಜ್ರೀನ್ ಬಾನು ಮನೆಯನ್ನು ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಹಿಜಾಬ್ ಕುರಿತ ಕಂಗಾನಾ ಹೇಳಿಕೆಗೆ ಹಿರಿಯ ನಟಿ ಶಬಾನಾ ಅಜ್ಮಿ ಖಡಕ್ ಉತ್ತರ ಹೀಗಿತ್ತು..
ಪದಕ ಗೆದ್ದಿದ್ದು ನನ್ನ ಸಹೋದರರು: ಈ ಪದಕಗಳನ್ನು ನಾನು ಗೆದ್ದಿಲ್ಲ. ನನ್ನ ಸಹೋದರರು ಈ ಪದಕಗಳನ್ನು ಗೆದ್ದಿದ್ದಾರೆ. ಶಾದಾಬ್ ಮತ್ತು ನಯಾಬ್ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು. ಅವರು ಗ್ಯಾರೇಜ್ನಲ್ಲಿ ಕೆಲಸ ಮಾಡಿ, ನನ್ನನ್ನು ಓದಿಸಿದ್ದಾರೆ ಎಂದು ಗಜಾಲಾ ಭಾವುಕರಾಗಿದ್ದಾರೆ. ಅಂದ ಹಾಗೆ ಗಜಾಲಾ ದಿನಕ್ಕೆ 7 ಗಂಟೆಗಳ ಕಾಲ ಸಂಸ್ಕೃತ ಓದುತ್ತಾರೆ.
ಸಂಸ್ಕೃತ ಪ್ರಾಧ್ಯಾಪಕಿಯಾಗುವ ಕನಸು: ಗಜಾಲಾ ತನ್ನ ಕುಟುಂಬದೊಂದಿಗೆ ಲಖನೌದಲ್ಲಿ ವಾಸವಿದ್ದು, ಸಂಸ್ಕೃತ ಪ್ರಾಧ್ಯಾಪಕರಾಗುವುದು ತನ್ನ ಕನಸು ಎಂದಿದ್ದಾರೆ. ಕ್ಯಾಂಪಸ್‌ನಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಜಾಲಾ ಭಾಗವಹಿಸುತ್ತಾರೆ. ಸಂಸ್ಕೃತ, ಗಾಯತ್ರಿ ಮಂತ್ರ, ಸರಸ್ವತಿ ವಂದನಂ ಮುಂತಾದ ಭಕ್ತಿ ಶ್ಲೋಕಗಳನ್ನು ವೇದಿಕೆಯಲ್ಲಿ ಗಜಾಲಾ ಪಠಿಸುತ್ತಾರೆ ಎಂಬುದು ಅವರ ಸಂಸ್ಕೃತ ಪ್ರೀತಿಗೆ ಹಿಡಿದ ಕನ್ನಡಿಯಾಗಿದೆ.