ಕೋಲ್ಕತ್ತಾ(ಪಶ್ಚಿಮ ಬಂಗಾಳ): ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಬಗ್ಗೆ ತಿಳಿಯದೇ ಇರುವವರು ವಿರಳ. ಕೋಲ್ಕತ್ತಾದ ಕಾಳಿ ದೇವಿ ದೇವಸ್ಥಾನವು ವಿಶ್ವಪ್ರಸಿದ್ಧ ದಕ್ಷಿಣೇಶ್ವರ ಕಾಳಿ ದೇವಾಲಯವಾದ ತಾಯಿ ದುರ್ಗೆಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ನಗರದ ದಕ್ಷಿಣ ಅಂಚಿನಲ್ಲಿರುವ ಪಾಟುಲಿ ಸರೋವರದ ದಡದಲ್ಲಿ ದಕ್ಷಿಣೇಶ್ವರ ದೇವಾಲಯದಂತೆಯೇ ಹೊಸ ದೇವಾಲಯವನ್ನು ನಿರ್ಮಿಸಲಾಗುತ್ತಿದ್ದು, ಈ ದೇವಾಲಯದ ಕಾಮಗಾರಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.
ಮುಸ್ಲಿಂ ವಾಸ್ತುಶಿಲ್ಪಿಯಿಂದ ದೇವಾಲಯ ನಿರ್ಮಾಣ: ವಿಶೇಷವೆಂದರೆ ಈ ದೇವಾಲಯವನ್ನು ಮುಸ್ಲಿಂ ವಾಸ್ತುಶಿಲ್ಪಿ ಮೊಹಮ್ಮದ್ ಅಜರುದ್ದೀನ್ ಅವರ ನಿರ್ದೇಶನದಲ್ಲಿ ನಿರ್ಮಿಸಲಾಗುತ್ತಿದೆ. ಕೋಮು ಸೌಹಾರ್ದತೆಯ ಬಲವಾದ ಸಂದೇಶದೊಂದಿಗೆ ಭಬತರಿಣಿ ತಾಯಿ ಮಂದಿರದ ನಿಖರವಾದ ವಿನ್ಯಾಸದ ಕೆತ್ತನೆ ಭರದಿಂದ ಸಾಗಿದೆ.
ವಾಸ್ತುಶಿಲ್ಪಿ ಅಜರುದ್ದೀನ್ ಉತ್ತರ 24 ಪರಗಣ ಜಿಲ್ಲೆಯ ದತ್ತಪುಕೂರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಎರಡು ದೇವಾಲಯಗಳು ಒಂದೇ ರೀತಿ ಕಾಣುತ್ತಿದ್ದು, ಕೊಂಚ ವ್ಯತ್ಯಾಸವಿದೆ. 1855 ರಲ್ಲಿ ದಕ್ಷಿಣೇಶ್ವರದಲ್ಲಿ ರಾಮನಾಥ ಮಂಡಲ್ ನಿರ್ಮಿಸಿದ ದೇವಾಲಯವು ಸುಮಾರು 100 ಅಡಿ ಎತ್ತರವಿದ್ದರೆ, ದಕ್ಷಿಣದಲ್ಲಿ ನಿರ್ಮಿಸಲಾಗುತ್ತಿರುವ ಈ ದೇವಾಲಯದ ಎತ್ತರ ಕೇವಲ 35 ಅಡಿಗಳಷ್ಟಿದೆ. ಈ ದೇವಾಲಯವನ್ನು ಬಂಗಾಳಿ ಹೊಸ ವರ್ಷದ ದಿನದಂದು ಉದ್ಘಾಟನೆ ಮಾಡಬೇಕಿತ್ತು. ಆದ್ರೆ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಕೆಲಸ ವೇಗವಾಗಿ ನಡೆಯುತ್ತಿತ್ತು. ಆದರೆ, ಬಿಸಿಲಿನ ಝಳದಿಂದಾಗಿ ಹಲವು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇನ್ನು ಏಳು ದಿನಗಳ ನಂತರ ಮತ್ತೆ ಕೆಲಸ ಆರಂಭವಾಗಲಿದೆ.
ದೇವಾಲಯದ ಮಾಸ್ಟರ್ ಆರ್ಕಿಟೆಕ್ಟ್ ಅಜರುದ್ದೀನ್ ಅವರ ನಿರ್ದೇಶನದಲ್ಲಿ ಅನೇಕ ಕಲಾವಿದರು ಕೆಲಸ ಮಾಡುತ್ತಿದ್ದಾರೆ. ದಕ್ಷಿಣೇಶ್ವರ ದೇವಾಲಯವು ರಾಜ್ಯದ ಅತ್ಯಂತ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಅಲ್ಲಿಗೆ ಆಗಮಿಸುತ್ತಾರೆ. ಆ ಪ್ರಸಿದ್ಧ ದೇವಾಲಯದ ಮಾದರಿಯಲ್ಲಿ ಪಾಟುಲಿ ಸರೋವರದ ದಡದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಈ ದೇವಾಲಯ ಕಟ್ಟುವ ಜವಾಬ್ದಾರಿಯನ್ನು ಮುಖ್ಯವಾಗಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ವಾರ್ಡ್ ಸಂಖ್ಯೆ 101 ರ ಕೌನ್ಸಿಲರ್ ಬಪ್ಪಡಿತ್ಯ ದಾಸ್‌ಗುಪ್ತಾ ಅವರು ತೆಗೆದುಕೊಂಡಿದ್ದಾರೆ. ನಗರದ ಭಕ್ತರಿಗೆ ಇದು ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಒಂದಾಗಲಿದೆ ಎಂದು ಹೇಳಿದರು.
ಇದು ದಕ್ಷಿಣದ ಜನರಿಗೆ ಉಡುಗೊರೆಯಾಗಿದೆ. ಅವರು ಸುಲಭವಾಗಿ ದಕ್ಷಿಣೇಶ್ವರ ಕಾಳಿ ಮಾತೆಯ ದರ್ಶನವನ್ನು ಪಡೆಯಬಹುದಾಗಿದೆ. ಕಲಾವಿದರಿಗೆ ಯಾವುದೇ ಜಾತಿ ಧರ್ಮ ಭೇದ ಭಾವ ಇಲ್ಲ. ಅಜರುದ್ದೀನ್ ತಮ್ಮ ಕೌಶಲ್ಯದಿಂದ ದಕ್ಷಿಣೇಶ್ವರ ದೇವಾಲಯವನ್ನು ಪರಿಪೂರ್ಣವಾಗಿ ನಿರ್ಮಿಸಿದ್ದಾರೆ. ಈ ದೇವಾಲಯದ ಬಗ್ಗೆ ಸ್ಥಳೀಯ ಜನರಲ್ಲಿ ಕುತೂಹಲ ಕಂಡುಬರುತ್ತಿದೆ ಎಂದು ಕೌನ್ಸಿಲರ್ ಬಪ್ಪಡಿತ್ಯ ದಾಸ್‌ಗುಪ್ತಾ ಹೇಳಿದರು.
ಕೆಲವು ದಿನಗಳ ನಂತರ ಕಾಮಗಾರಿ ಪುನರಾರಂಭಗೊಂಡು, ಬಣ್ಣ ಬಳಿಯಲಾಗುವುದು. ದಕ್ಷಿಣೇಶ್ವರ ದೇವಿಯ ಮೂರ್ತಿಯನ್ನು ಹೋಲುವ ಅಮ್ಮನವರ ಮೂರ್ತಿ ಬರಲಿದೆ. ಇಡೀ ದೇಗುಲದ ಒಳಹೊರಗು ದೀಪಗಳಿಂದ ಅಲಂಕೃತಗೊಳ್ಳಲಿದೆ ಎಂದು ಬಪ್ಪಡಿತ್ಯ ದಾಸ್‌ಗುಪ್ತಾ ಅವರು ಈಟಿವಿ ಭಾರತಗೆ ಮಾಹಿತಿ ನೀಡಿದರು.
ಓದಿ: ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗೆ ತೊಡುಕಾಗಲಿದೆ ಭಾರತದ ಶಾಖದ ಅಲೆ; ಅಧ್ಯಯನ