ಪಣಜಿ (ಗೋವಾ): ಇತ್ತೀಚಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಿಜೆಪಿ ನಾಯಕಿ ಹಾಗು ನಟಿ ಸೋನಾಲಿ ಫೋಗಟ್ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಮಹಿಳೆಯ ಮೃತದೇಹದ ಮೇಲೆ ಅನೇಕ ಗಾಯದ ಗುರುತುಗಳಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಗಿದೆ. ಹೀಗಾಗಿ ಗೋವಾ ಪೊಲೀಸರು ಇದೊಂದು ಕೊಲೆ ಎಂಬ ತೀರ್ಮಾನಕ್ಕೆ ಬಂದಿದ್ದು, ಗುರುವಾರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹರಿಯಾಣದ ಹಿಸಾರ್‌ನ ಸೋನಾಲಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದರು. ನಂತರ ಅವರ ಮೃಹದೇಹವನ್ನು ಉತ್ತರ ಗೋವಾದ ಸೇಂಟ್ ಆಂಥೋನಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆರಂಭದಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಭಾವಿಸಿದ್ದರು.
ಆದರೆ, ಇದೀಗ ಸೋನಾಲಿ ಫೋಗಟ್ ಅವರ ಸಹೋದರ ರಿಂಕು ಢಾಕಾ ಅವರು ತಮ್ಮ ಸಹೋದರಿಯನ್ನು ಆಕೆಯ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಅವರ ಸ್ನೇಹಿತ ಸುಖ್ವಿಂದರ್ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ, ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ. ಆಗಸ್ಟ್ 23ರಂದು ಸಾಯುವ ಕೆಲವು ಗಂಟೆಗಳ ಮೊದಲು ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಸೋನಾಲಿ ಮಾತನಾಡಿದ್ದರು ಎಂದು ರಿಂಕು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಈ ಸಂಭಾಷಣೆಯ ಸಮಯದಲ್ಲಿ ಸೋನಾಲಿ ತನ್ನ ಸಿಬ್ಬಂದಿ ಬಗ್ಗೆ ಪ್ರಸ್ತಾಪಿಸಿದ್ದರು. ಆಪ್ತ ಸಹಾಯಕನೇ ಊಟಕ್ಕೆ ಡ್ರಗ್ಸ್ ಸೇರಿಸಿ ಸೋನಾಲಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ರಿಂಕು ಆರೋಪಿಸಿದ್ದಾರೆ. ಏತನ್ಮಧ್ಯೆ, ಸೋನಾಲಿ ಅವರ 15 ವರ್ಷದ ಮಗಳು ಯಶೋಧಾ ಕೂಡ ತನ್ನ ತಾಯಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಫೋಗಟ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. 2020ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಸೋನಾಲಿ ಫೋಗಟ್ ಸಾವು-ಸಹಾಯಕರು ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ: ಕುಟುಂಬಸ್ಥರ ಆರೋಪ