ಮುಂಬೈ (ಮಹಾರಾಷ್ಟ್ರ): ಬಹುಮಹಡಿಯ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಅಲ್ಲದೇ, ಅಗ್ನಿ ಅವಘಡದಲ್ಲಿ ಹೋಟೆಲ್‌ನ ಪೀಠೋಪಕರಣಗಳು ಸೇರಿ ಹಲವು ವಸ್ತುಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಸಾಂತಾಕ್ರೂಜ್ ಪೂರ್ವ ಪ್ರದೇಶದ ಪ್ರಭಾತ್ ಕಾಲೋನಿಯಲ್ಲಿರುವ ಗ್ಯಾಲಕ್ಸಿ ಹೋಟೆಲ್‌ನಲ್ಲಿ ಈ ದುರಂತ ಸಂಭವಿಸಿದೆ. ಇಂದು ಮಧ್ಯಾಹ್ನ 1.10ರ ಸುಮಾರಿಗೆ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಮೂವರು ದುರ್ಮರಣ ಹೊಂದಿದ್ದಾರೆ. ಮೃತರನ್ನು ರೂಪಲ್ ಕಂಜಿ (25), ಕಿಶನ್ (28) ಮತ್ತು ಕಾಂತಿಲಾಲ್ ಗೋವರ್ಧನ್ (48) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Fridge Blast : ಶಾರ್ಟ್ ಸರ್ಕ್ಯೂಟ್ನಿಂದ ಸಿಡಿದ ಫ್ರಿಡ್ಜ್.. ಮಲಗಿದ್ದ ಬಾಲಕಿ, ಮಹಿಳೆ ಸಜೀವದಹನ; ಮನೆಗೂ ತೀವ್ರ ಹಾನಿ
ಬೆಂಕಿ ದುರಂತದಲ್ಲಿ ಗಾಯಗೊಂಡಿದ್ದ ರೂಪಲ್, ಕಿಶನ್ ಹಾಗೂ ಗೋವರ್ಧನ್ ಆಸ್ಪತ್ರೆಗೆ ರವಾಗಿಸಿತ್ತು. ಅಷ್ಟರಲ್ಲೇ, ಮೂವರು ಸಹಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದರು. ಮತ್ತಿಬ್ಬರು ಗಾಯಾಳುಗಳಾದ ಅಲ್ಫಾ ವಖಾರಿಯಾ (19) ಹಾಗೂ ಮಂಜುಳಾ ವಖಾರಿಯಾ (49) ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಅಗ್ನಿ ಅವಘಡದಲ್ಲಿ ಹೋಟೆಲ್‌ನ ವೈರಿಂಗ್, ಪೀಠೋಪಕರಣಗಳು, ಹವಾನಿಯಂತ್ರಣ (ಎಸಿ) ಸುಟ್ಟು ಹೋಗಿದೆ. ಜೊತೆಗೆ ಕೊಠಡಿ ಸಂಖ್ಯೆ 103 ಮತ್ತು 203ರಲ್ಲಿ ಹಾಸಿಗೆಗಳು, ಬಟ್ಟೆಗಳು ವಸ್ತುಗಳು ಸುಟ್ಟು ಕರಕಲಾಗಿವೆ. ಈ ಬೆಂಕಿ ದುರಂತದ ವಿಷಯ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಸುರಕ್ಷತಾ ಮಾನದಂಡ ಪಾಲಿಸದ ಹೋಟೆಲ್: ಈ ಘಟನೆಯ ಕುರಿತು ಮುಂಬೈ ಮಹಾನಗರ ಪಾಲಿಕೆಯ ಪೂರ್ವ ವಾರ್ಡ್ ಆರೋಗ್ಯಾಧಿಕಾರಿ ಡಾ. ಸತೀಶ್ ಬಡಗಿರೆ ಪ್ರತಿಕ್ರಿಯಿಸಿ, ನಾವು ಇತ್ತೀಚೆಗೆ ಗ್ಯಾಲಕ್ಸಿ ಹೋಟೆಲ್‌ಗೆ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ಕಾರಣಕ್ಕೆ ನೋಟಿಸ್ ನೀಡಿದ್ದೇವೆ. ಈ ಸಂಬಂಧ ಹೋಟೆಲ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇವೆ. ಆದರೆ, ಹೋಟೆಲ್‌ನ ಕಡೆಯಿಂದ ಯಾರೂ ನಮ್ಮ ನೋಟಿಸ್‌ಗೆ ಉತ್ತರಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಬ್ಬ ಪಾಲಿಕೆ ಅಧಿಕಾರಿ ಮಾತನಾಡಿ, ಹೋಟೆಲ್‌ನಲ್ಲಿ ಕೆಲ ರಚನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಇದರ ನಿಯಮಗಳ ಉಲ್ಲಂಘನೆ ಕುರಿತು ಪಾಲಿಕೆಯ ಕಟ್ಟಡ ಮತ್ತು ಕಾರ್ಖಾನೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 6 ಮಂದಿ ದಾರುಣ ಸಾವು