ಮುಂಬೈ: ಸೋಮವಾರದಿಂದ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಹಾನಗರದಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ಮಳೆ ನೀರಿನಲ್ಲಿ ಹೊರಳಾಡಿದ್ದಾನೆ. ನೀರು ನಿಂತ ರಸ್ತೆಯಲ್ಲಿ ಹೊರಳಾಡುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಬಸ್ ಸೇರಿದಂತೆ ವಾಹನಗಳು ನೀರಿನಲ್ಲೇ ಸಂಚರಿಸುತ್ತಿವೆ. ಆ ನೀರು ತುಂಬಿದ ರಸ್ತೆಯ ಮೇಲೆ ವ್ಯಕ್ತಿಯೊಬ್ಬ ಶಾಂತವಾಗಿ ಮಲಗಿರುವುದು ಮತ್ತು ಅವನ ಮೇಲೆ ನೀರು ಚಿಮ್ಮುವುದನ್ನ ಕಾಣಬಹುದು. ಆದರೆ ಇದಕ್ಕೆಲ್ಲಾ ಕ್ಯಾರೇ ಎನ್ನದೇ ತನ್ನದೇ ಲೋಕದಲ್ಲಿ ಮುಳುಗಿದ್ದಾನೆ. ಇದು ಮದ್ಯದ ಅಮಲಿನ ಕರಾಮತ್ತು ಎಂದು ಹೇಳಲಾಗುತ್ತಿದೆ.
ವಿಕ್ರಾಂತ್ ಜೋಶಿ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ವ್ಯಕ್ತಿಯ ವಿಡಿಯೋವನ್ನು ಹಂಚಿಕೊಂಡಿದ್ದು, ಧನ್ಯವಾದಗಳು ಬಿಎಂಸಿ, ಈ ವ್ಯಕ್ತಿಯನ್ನು ಮಲಾಡ್ನಲ್ಲಿ ಮಾಲ್ಡೀವ್ಸ್ ಎಂದು ಭಾವಿಸಿದ್ದಕ್ಕಾಗಿ ಎಂದು ಶೀರ್ಷಿಕೆ ಬರೆದಿದ್ದಾರೆ. ಜೊತೆಗೆ ವಿಡಿಯೋವನ್ನು ಶಾಹಿದ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, 'ಈ ವ್ಯಕ್ತಿ ಮಲಾಡ್ನಲ್ಲಿ ಮಾಲ್ಡೀವ್ಸ್ ಅನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿ ಹಿಂದಿ ಸಾಂಗ್ನ ಲೈನ್ ಒಂದನ್ನು ಬರೆದುಕೊಂಡಿದ್ದಾರೆ'.
ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ನಗರ ಜಲಾವೃತಗೊಂಡಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಉತ್ತರಕನ್ನಡದಲ್ಲಿ ನಿಲ್ಲದ ಮಳೆ: ರೆಡ್ ಅಲರ್ಟ್, 3 ತಾಲೂಕುಗಳಲ್ಲಿ ಕಾಳಜಿ ಕೇಂದ್ರ