ನಾಗಪುರ: ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಆದೇಶ ನೀಡಿದೆ. ಇತ್ತೀಚಗೆ ದಾರಿಹೋರ ಮೇಲೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಈ ವಿಚಾರವನ್ನು ನ್ಯಾಯಾಲಯ ಗಮನಿಸಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಆದೇಶ ನೀಡಿದೆ.
ಅಷ್ಟೇ ಅಲ್ಲ ಬೀದಿನಾಯಿಗಳ ವಿರುದ್ಧದ ಕಾರ್ಯಾಚರಣೆಗೆ ಅಡ್ಡಿಪಡಿಸುವವರ ವಿರುದ್ಧವೂ ಅಪರಾಧ ಪ್ರಕರಣಗಳನ್ನು ದಾಖಲಿಸುವಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಈ ಸಂಬಂಧ ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಅನಿಲ್ ಪನ್ಸಾರೆ ನೇತೃತ್ವದ ಪೀಠದಲ್ಲಿ ಈ ಸಂಬಂಧ ವಿಚಾರಣೆ ನಡೆಯಿತು.
ನಾಗಪುರ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶ್ವಾನ ಕಡಿತ ಪ್ರಕರಣಗಳು ಸಾಮಾನ್ಯ ಎನ್ನುವಂತಾಗಿದೆ. ಪರಿಣಾಮ ರಸ್ತೆ ಮೇಲೆ ಓಡಾಡಲು ನಾಗರಿಕರು ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ನಾಯಿಗಳ ದಾಳಿ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೋರಿ ವಿಜಯ್ ತಲೇವಾರ್ ಮತ್ತು ಮನೋಜ್ ಶಾಕ್ಯಾ ಎಂಬುವವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬೀದಿ ನಾಯಿಗಳಿಂದ ಗಾಯಗೊಂಡಿರುವ ನಾಗರಿಕರಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಮಹಾನಗರ ಪಾಲಿಕೆ ಮೌನ: ನಾಗಪುರದಲ್ಲಿ ಸುಮಾರು ಒಂದು ಲಕ್ಷ ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ. 2018ರಲ್ಲಿ ಇದರ ಸಂಖ್ಯೆ 81 ಸಾವಿರ ಇತ್ತು. ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಎದುರಿಸಲು ಮಹತ್ವದ ಹಾಗೂ ಕಾರ್ಯಸಾಧುವಾದ ಕ್ರಮಗಳನ್ನು ಕೈಗೊಂಡಿಲ್ಲ, ಆದ್ದರಿಂದ ಬೀದಿ ನಾಯಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ಪೀಠದ ಮುಂದೆ ಅರ್ಜಿದಾರರ ವಕೀಲರು ವಾದಿಸಿದ್ದರು.
ಬಾಕಿ ಇದ್ದ ಅರ್ಜಿ: ಬೀದಿನಾಯಿಗಳಿಗೆ ಸಂಬಂಧಿಸಿದ ಅರ್ಜಿ 2006ರಿಂದ ಬಾಕಿ ಇತ್ತು. ಕಳೆದ ಮೂರು ವರ್ಷಗಳಲ್ಲಿ ಇಲ್ಲಿ ನಾಯಿಗಳು ಕಚ್ಚಿ 8,843 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಅಂಶವನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ನ್ಯಾಯಾಲಯ ನೀಡಿದ ಸಲಹೆ/ ಸೂಚನೆಗಳೇನು? : ಬೀದಿನಾಯಿಗಳ ಬಗ್ಗೆ ದೂರು ನೀಡಲು ನಗರಸಭೆ ಟ್ವಿಟರ್, ವಾಟ್ಸ್‌ಆ್ಯಪ್ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು. ನಾಗರಿಕರ ದೂರುಗಳನ್ನು ಕೂಡಲೇ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ನಾಯಿಗಳ ಹತ್ಯೆ ಮಾಡಿ, ಕ್ರಿಮಿನಾಶಕ ಮತ್ತು ಆಶ್ರಯಕ್ಕೆ ಸಂಬಂಧಿಸಿದಂತೆ ಕಾನೂನಿನ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಬೀದಿ ನಾಯಿಗಳನ್ನು ಸಾಕಲು ವಿಶೇಷ ಸ್ಥಳವನ್ನು ನಿಗದಿಪಡಿಸಬೇಕು ಎಂದು ಪಾಲಿಕೆ ಮತ್ತು ಸರ್ಕಾರಕ್ಕೆ ಸೂಚನೆ ನೀಡಿದೆ.
ಇದನ್ನು ಓದಿ:ಮೃತ ವ್ಯಕ್ತಿಗೆ ಮುತ್ತನ್ನಿಟ್ಟು ಪ್ರೀತಿಯ ವಿದಾಯ ಹೇಳಿದ ಲಾಂಗೂರ್ ಕೋತಿ ವಿಡಿಯೋ ವೈರಲ್..