ಮುಂಬೈ: ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನಕ್ಕೆ ಜಾಮೀನು ಕೋರಿ ಮಹಾರಾಷ್ಟ್ರ ಸಚಿವರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಎನ್‌ಸಿಪಿ ಹಿರಿಯ ನಾಯಕ ದೇಶಮುಖ್ ಮತ್ತು ನವಾಬ್ ಮಲಿಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಪ್ರಸ್ತುತ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ
2021ರ ನವೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಫೆಬ್ರವರಿ 23 ರಂದು ನವಾಬ್ ಮಲಿಕ್ ಅವರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದಿಂದ ಆರು ಸ್ಥಾನಗಳಿಗೆ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ, ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ)ಗೆ ಪ್ರತಿ ಶಾಸಕರ ಮತವೂ ನಿರ್ಣಾಯಕವಾಗಿದೆ.