ಜೈಪುರ(ರಾಜಸ್ಥಾನ): ಜೆಇಇ ಅಡ್ವಾನ್ಸ್ಡ್ (JEE-Advanced) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಜೈಪುರದ ಮೃದುಲ್ ಅಗರ್ವಾಲ್ ಶೇಕಡಾವಾರು ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಶೇಕಡಾ 96.66 ಅಂಕಗಳನ್ನು ಗಳಿಸಿರುವ ಮೃದುಲ್ 360 ಅಂಕಗಳಲ್ಲಿ 348 ಅಂಕಗಳನ್ನು ಗಳಿಸಿದ್ದು, ಆಲ್ ಇಂಡಿಯಾ ಟಾಪರ್ ಆಗಿದ್ದಾರೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಅಕ್ಟೋಬರ್ 3 ರಂದು ನಡೆಸಲಾಗಿತ್ತು.
ಕಾವ್ಯಾ ಚೋಪ್ರಾ ಎಂಬ ಐಐಟಿ ದೆಹಲಿ ವಲಯದ ವಿದ್ಯಾರ್ಥಿನಿ ಬಾಲಕಿಯರ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದು, 360ಕ್ಕೆ 286 ಅಂಕ ಗಳಿಸಿದ್ದಾರೆ. ಅವರು 98ನೇ ಶ್ರೇಯಾಂಕದಲ್ಲಿದ್ದಾರೆ.
ಮಾರ್ಚ್ನಲ್ಲಿ ಜೆಇಇ ಮೇನ್ಸ್ ಪರೀಕ್ಷೆ ನಡೆದಿದ್ದು, ಚೋಪ್ರಾ 300 ಅಂಕಗಳಿಗೆ 300 ಅಂಕ ಪಡೆದಿದ್ದರು. ಇದೇ ವೇಳೆ ಮೃದುಲ್ ಅಗರ್ವಾಲ್ ಕೂಡಾ ನೂರಕ್ಕೆ ನೂರು ಶೇಕಡಾ ಅಂಕ ಪಡೆದ 44 ಮಂದಿಯಲ್ಲಿ ಸ್ಥಾನ ಪಡೆದಿದ್ದರು.
ದೇಶದ 23 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳಿಗೆ ಪ್ರವೇಶಕ್ಕಾಗಿ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಜೆಇಇ-ಮೈನ್ಸ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಜೆಇಇ- ಅಡ್ವಾನ್ಸ್ಡ್ ಪರೀಕ್ಷೆಯನ್ನು ಬರೆದಿದ್ದಾರೆ.
ವರದಿಯ ಪ್ರಕಾರ, ಈ ವರ್ಷ ಒಟ್ಟು 41,862 ಅಭ್ಯರ್ಥಿಗಳು ಜೆಇಇ-ಅಡ್ವಾನ್ಸ್ಡ್ನಲ್ಲಿ ಅರ್ಹತೆ ಪಡೆದಿದ್ದಾರೆ. ಅವರಲ್ಲಿ 6,452 ಮಹಿಳಾ ಅಭ್ಯರ್ಥಿಗಳೂ ಇದ್ದಾರೆ. ಪರೀಕ್ಷೆಗೆ ನೋಂದಾಯಿಸಿಕೊಂಡ 151,193 ಅಭ್ಯರ್ಥಿಗಳಲ್ಲಿ, 141,699 ಜೆಇಇ-ಅಡ್ವಾನ್ಸ್ಡ್ನ ಎರಡೂ ಪತ್ರಿಕೆಗಳಿಗೂ ಹಾಜರಾಗಿದ್ದರು.
ಇದನ್ನೂ ಓದಿ: ಮಾದಕ ವಸ್ತುಗಳ ಆದಾಯ ದೇಶವಿರೋಧಿ ಚಟುವಟಿಕೆಗಳಿಗೆ ಬಳಕೆ: ಭಾಗವತ್ ಕಳವಳ