ರೈಸೆನ್ (ಮಧ್ಯಪ್ರದೇಶ): ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಖಾಸಗಿ ಶಾಲೆಯೊಂದು ಐದು ವರ್ಷದ ಬಾಲಕಿಗೆ ಒಂಟಿ ತಾಯಿಯ ಮಗಳು ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಲೆಯ ಅಧಿಕಾರಿಗಳ ವಿರುದ್ಧ ಮಹಿಳೆ ನೀಡಿದ ದೂರಿನ ಮೇರೆಗೆ ಜಿಲ್ಲಾಡಳಿತ ಈ ಕುರಿತು ತನಿಖೆಗೆ ಆದೇಶಿಸಿದೆ. ಜಿಲ್ಲೆಯ ಗರತ್‌ಗಂಜ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ, ತನ್ನ ಐದು ವರ್ಷದ ಮಗಳನ್ನು ಶಾಲೆಗೆ ಸೇರಿಸಲು ಅದೇ ಪ್ರದೇಶದಲ್ಲಿರುವ ಖಾಸಗಿ ಶಾಲೆಗೆ ಹೋಗಿದ್ದಾರೆ.
ಶಾಲಾ ಆಡಳಿತ ಮಂಡಳಿಯು ಮಹಿಳೆಗೆ ಅಗತ್ಯ ದಾಖಲೆಗಳು ಮತ್ತು ಪ್ರವೇಶ ಶುಲ್ಕವನ್ನು ನೀಡುವಂತೆ ಸೂಚಿಸಿದೆ. ದಾಖಲಾತಿಗಳ ಪ್ರವೇಶ ಪತ್ರದಲ್ಲಿ ತಂದೆಯ ಹೆಸರಿನ ಕಾಲಂನನ್ನು ಗಮನಿಸಿದ ಮಹಿಳೆ, ನಾನು ಒಂಟಿ ತಾಯಿ ಮತ್ತು ಪತಿಯೊಂದಿಗೆ ವಾಸಿಸುತ್ತಿಲ್ಲ. ಮಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಶಾಲಾ ಅಧಿಕಾರಿಗಳಿಗೆ ಹೇಳಿದ್ದಾರೆ.
ಮಹಿಳೆ ಆರೋಪ ನಿರಾಕರಿಸಿದ ಆಡಳಿತ ಮಂಡಳಿ: ಶಾಲೆಯ ಆಡಳಿತ ಮಂಡಳಿ ಅವರ ಆರೋಪವನ್ನು ತಳ್ಳಿಹಾಕಿದ್ದು, ಮಹಿಳೆ ತನ್ನ ಮಗಳನ್ನು ಸಿಬಿಎಸ್‌ಇ 2ನೇ ತರಗತಿಗೆ ಸೇರಿಸಲು ಬಂದಿದ್ದರು. ಆದರೆ, ಅಷ್ಟರೊಳಗೆ ಸೀಟುಗಳು ಭರ್ತಿಯಾಗಿದ್ದವು. ಹೀಗಿದ್ರೂ ಅವರು ತಮ್ಮ ಮಗಳನ್ನು 2 ನೇ ತರಗತಿಗೆ ಸೇರಿಸಬೇಕೆಂದು ಬಯಸಿದ್ದರೂ. ಆದ್ರೆ ಒಂದನೇ ತರಗತಿ ಮಾರ್ಕ್ ಶೀಟ್ ಮತ್ತು ಸಂಬಂಧಿತ ದಾಖಲೆಗಳನ್ನು ಸಹ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಂಜನಾದ್ರಿ ಆಯ್ತು ಈಗ ಪಂಪಾಸರೋವರ ವಿವಾದ: ಗುಜರಾತ್ನಿಂದ ವಿವಾದಾತ್ಮಕ ಟ್ವೀಟ್..!
ಶಾಲೆಯ ಅಧಿಕಾರಿಗಳು ಜುಲೈ 2 ರಂದು ಶಾಲೆಗೆ ಬರುವಂತೆ ಹೇಳಿದರು. ಆದರೆ, ಅವರು ಅಲ್ಲಿಗೆ ಬಂದಾಗ ಸೀಟುಗಳು ಭರ್ತಿಯಾಗಿವೆ ಎಂದು ಹೇಳಿ ಮಗಳನ್ನು ಸೇರಿಸಿಕೊಳ್ಳಲು ನಿರಾಕರಿಸಿದರು. ಅಲ್ಲದೇ, ಶಾಲೆಯ ಗೌರವ ಹಾಳಾಗುತ್ತದೆ ಎಂಬ ಕಾರಣಕ್ಕೆ ಅಂತಹ ಪ್ರವೇಶಗಳನ್ನು ತೆಗೆದುಕೊಳ್ಳಬೇಡಿ ಎಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಶಾಲೆಯ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
ನಂತರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಆಕೆಯ ದೂರನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಪ್ರಕರಣದ ತನಿಖೆ ನಡೆಸಲಾಗುತ್ತಿದೆ, ತನಿಖೆ ಪೂರ್ಣಗೊಂಡ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅರವಿಂದ್ ದುಬೆ ತಿಳಿಸಿದ್ದಾರೆ.