ಶಹದೋಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದಾರೆ. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಹೋದ ಕಂದಾಯ ಇಲಾಖೆಯ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ. ಪ್ರಸನ್ನ ಸಿಂಗ್ (45) ಎಂಬುವವರೇ ಹತ್ಯೆಗೀಡಾದ ಅಧಿಕಾರಿ ಎಂದು ಎಂದು ಗುರುತಿಸಲಾಗಿದೆ.
ಇಲ್ಲಿನ ಗೋಪಾಲ್‌ಪುರ ಪ್ರದೇಶದ ಸೋನ್ ನದಿಯ ಶನಿವಾರ ಮಧ್ಯರಾತ್ರಿ ನಡೆದ ಈ ಘಟನೆ ನಡೆದಿದೆ. ಕಂದಾಯ ಇಲಾಖೆಯಲ್ಲಿ ಪಟ್ವಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸನ್ನ ಸಿಂಗ್ ಸೇರಿದಂತೆ ಸರ್ಕಾರಿ ನೌಕರರ ಗಸ್ತು ತಂಡವು ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆದಿತ್ತು. ಈ ವೇಳೆ, ಚಾಲಕನು ಅಧಿಕಾರಿ ಮೇಲೆಯೇ ಟ್ರಾಕ್ಟರ್ ಚಲಾಯಿಸಿದ್ದಾನೆ. ಇದರ ಪರಿಣಾಮ ಅಧಿಕಾರಿ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಆರೋಪಿ ಚಾಲಕ ಟ್ರ್ಯಾಕ್ಟರ್ ಮತ್ತು ಟ್ರಾಲಿ ಸಮೇತ ಪರಾರಿಯಾಗಿದ್ದಾನೆ ಎಂದು ಡಿಯೋಲಂಡ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜ್‌ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಪಿಎಸ್ಐ ಮೇಲೆ ಹಲ್ಲೆಗೈದು ತಪ್ಪಿಸಿಕೊಳ್ಳಲು ಯತ್ನ: ನಟೋರಿಯಸ್ ರೌಡಿಶೀಟರ್ಗೆ ಗುಂಡೇಟು
ಹತ್ಯೆಗೀಡಾದ ಪ್ರಸನ್ನ ಸಿಂಗ್ ಬೋಹಾರಿ ತಹಸೀಲ್‌ನ ಖಡ್ಡಾ ಗ್ರಾಮದಲ್ಲಿ ಪಟ್ವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿದ ಚಾಲಕನನ್ನು ಮೈಹಾರ್ ಜಿಲ್ಲೆಯ ನಿವಾಸಿ, 25 ವರ್ಷದ ಶುಭಂ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಈಗಾಗಲೇ, ಪೊಲೀಸರು ಕಾರ್ಯಾಚರಣೆ ನಡೆಸಿದ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಶಹದೋಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಪ್ರತೀಕ್ ಪ್ರತಿಕ್ರಿಯಿಸಿ, ಈ ಘಟನೆ ತಿಳಿದ ರಕ್ಷಣವೇ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಭಾನುವಾರ ಬೆಳಗ್ಗೆ ಟ್ರಾಕ್ಟರ್ ಚಾಲಕ ಶುಭಂ ವಿಶ್ವಕರ್ಮನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಈತ ಕೃತ್ಯ ನಡೆದ ಸ್ಥಳದಿಂದ ಸುಮಾರು 8 ಕಿಮೀ ದೂರದಲ್ಲಿರುವ ಮೈಹಾರ್ ಜಿಲ್ಲೆಯ ನಿವಾಸಿಯಾಗಿದ್ದಾನೆ. ಅಲ್ಲದೇ, ಕೃತ್ಯಕ್ಕೆ ಬಳಸಿದ ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ ಮತ್ತು ಅದರ ಮಾಲೀಕನನ್ನೂ ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ವಂದನಾ ವೈದ್ಯ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ ದೂರುಗಳ ಹಿನ್ನೆಲೆಯಲ್ಲಿ ಕಂದಾಯ, ಗಣಿ ಇಲಾಖೆಗಳ ಜಂಟಿ ತಂಡ ಹಾಗೂ ಪೊಲೀಸರು ನ.23ರಂದು ತಪಾಸಣೆ ಕೈಕೊಂಡಿದ್ದರು. ಇದೇ ಪ್ರದೇಶದಲ್ಲಿ ಗುರುವಾರ ಮತ್ತು ಶುಕ್ರವಾರ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ರಾತ್ರಿ 8.30ಕ್ಕೆ ಬಿಯೋಹರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಇತರ ಅಧಿಕಾರಿಗಳು ಇದೇ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಭೇದಿಸಿದ್ದಾರೆ. ನಂತರ ಪ್ರಸನ್ನ ಸಿಂಗ್ ಮತ್ತು ಅವರ ಮೂವರು ಸಹೋದ್ಯೋಗಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆಣ್ಣು ಭ್ರೂಣ ಪತ್ತೆ-ಗರ್ಭಪಾತ: ವೈದ್ಯ ಸೇರಿ ಮತ್ತೆ ಐವರ ಬಂಧನ; ಆರೋಪಿಗಳ ಸಂಖ್ಯೆ 9ಕ್ಕೇರಿಕೆ