ಭೋಪಾಲ್(ಮಧ್ಯಪ್ರದೇಶ): ಕೋವಿಡ್ ವ್ಯಾಕ್ಸಿನ್ ಬಗ್ಗೆ ಈ ಹಿಂದಿನಿಂದಲೂ ಅನೇಕರು ಅಪಪ್ರಚಾರ ಮಾಡ್ತಿದ್ದು, ಇದೇ ಕಾರಣಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಅಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಮಲಿಖೇಡಿ ಗ್ರಾಮದಲ್ಲಿ ಮಹಿಳಾ ತಹಶೀಲ್ದಾರ್ ನೇತೃತ್ವದ ತಂಡ ವ್ಯಾಕ್ಸಿನ್ ಹಾಕಲು ತೆರಳಿದ್ದ ವೇಳೆ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಹಿಂದೆ ಕೂಡ ಈ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಸೋಮವಾರ ವೈದ್ಯಕೀಯ ತಂಡ ಮತ್ತೊಮ್ಮೆ ಗ್ರಾಮಕ್ಕೆ ತೆರಳಿ ಅಲ್ಲಿನ ಜನರ ಮನವೊಲಿಕೆ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಈ ವೇಳೆ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಮದ್ಯಪಾನ ಮಾಡಲು ಸಿಗದ ಅವಕಾಶ: ಢಾಬಾ ಧ್ವಂಸಗೊಳಿಸಿ, ಸಿಬ್ಬಂದಿ ಅಪಹರಣ
ವೈದ್ಯಕೀಯ ತಂಡದಲ್ಲಿ ತಹಶೀಲ್ದಾರ್, ಗ್ರಾಮ ಪಂಚಾಯ್ತಿ ಅಧಿಕಾರಿ, ಆಶಾ ಕಾರ್ಯಕರ್ತೆ, ನರ್ಸ್ ಹಾಗೂ ಸ್ಥಳೀಯ ಪಂಚಾಯ್ತಿ ಸದಸ್ಯರು ಇದ್ದರು ಎಂದು ತಿಳಿದು ಬಂದಿದೆ. ಅಲ್ಲಿನ ಜನರಿಗೆ ಮನವರಿಕೆ ಮಾಡಲು ಮುಂದಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ 50 ಜನರ ಗುಂಪು ಕೈಯಲ್ಲಿ ರಾಡ್ ಹಾಗೂ ಕತ್ತಿ ಹಿಡಿದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಹಲ್ಲೆ ಸಹ ನಡೆಸಲಾಗಿದ್ದು ಪರಿಣಾಮ ಗ್ರಾಮ ಪಂಚಾಯ್ತಿ ಮಹಿಳಾ ಅಧಿಕಾರಿ ತಲೆಗೆ ಗಾಯವಾಗಿದೆ. ಹೀಗಾಗಿ ಅವರು ಸ್ಥಳದಿಂದ ತೆರಳಿದ್ದಾರೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಎಸ್ಪಿ ಆಕಾಶ್ ಬುರೈ, ಪ್ರಕರಣ ದಾಖಲಾಗಿದ್ದು, ದಾಳಿ ಮಾಡಿರುವ ನಾಲ್ವರ ಬಂಧನ ಮಾಡಲಾಗುವುದು ಎಂದು ತಿಳಿಸಿದ್ದಾರೆ.