ಸಾಗರ (ಮಧ್ಯಪ್ರದೇಶ): ಆತ ಮನೆ ಬಿಟ್ಟು ಹೋಗಿ 22 ವರ್ಷಗಳೇ ಕಳೆದಿದ್ದವು. ಅವನು ಹಿಂದಿರುಗಿ ಬರಬಹುದು ಎಂಬ ಭರವಸೆಯನ್ನು ಕುಟುಂಬಸ್ಥರು ಕಳೆದುಕೊಂಡಿದ್ದರು. ಆದರೆ, ಅವರ ಸಹೋದರನು ಕಳೆದ ಒಂದು ವರ್ಷದ ಹಿಂದೆ ಸಾಗರ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಸಿಂಗ್ ಭೇಟಿ ಮಾಡಿ ಈ ಕುರಿತು ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಎಸ್ಪಿ, ಶೋಧ ಕಾರ್ಯಕ್ಕಿಳಿದರು. ಇದೀಗ ಪ್ರಹ್ಲಾದ್ ಸಿಂಗ್ ಖಮ್ಖೇಡಾ ಗ್ರಾಮದ ಮನೆಗೆ ಹಿಂದಿರುಗಿದ್ದಾರೆ.
ಸಹೋದರನ ಪತ್ತೆಗಾಗಿ ಎಸ್ಪಿ ಮೊರೆ
2020 ರಲ್ಲಿ, ವೀರ್ ಸಿಂಗ್, ಎಸ್ಪಿ ಅತುಲ್ ಸಿಂಗ್ ಅವರನ್ನು ಭೇಟಿಯಾಗಿ ತನ್ನ ಸಹೋದರ ನಾಪತ್ತೆಯಾಗಿರುವ ಬಗ್ಗೆ ತಿಳಿಸಿದ್ದರು. ಅತುಲ್ ಸಿಂಗ್ ಅವರು ಪ್ರಹ್ಲಾದ್ ಕುಟುಂಬಸ್ಥರು ನೀಡಿದ ಮಾಹಿತಿ ಮೇರೆಗೆ ಪಾಕ್ನಲ್ಲಿ ಬಂಧಿತನಾಗಿರುವ ಪ್ರಹ್ಲಾದ್ ಇವರ ಸಹೋದರನೇ ಎಂದು ಪತ್ತೆ ಹಚ್ಚಿದರು. ಬಳಿಕ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದರು.
ಗ್ರಾಮಸ್ಥರಿಂದ ಮಾಹಿತಿ ಸಂಗ್ರಹ
ಜೂನ್ 2021 ರಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಹ್ಲಾದ್ ಬಗ್ಗೆ ಮಾಹಿತಿ ಕೇಳಿ, ಗ್ರಾಮಸ್ಥರಿಂದ ಹೇಳಿಕೆ ಪಡೆಯಿತು. ಇದರ ಆಧಾರದ ಮೇಲೆ, ಪಾಕಿಸ್ತಾನದ ಜೈಲಿನಲ್ಲಿರುವ ಕೈದಿ ನಿಜವಾಗಿಯೂ ಸಾಗರ ಜಿಲ್ಲೆಯ ಗೌರ್‌ಜಾಮರ್ ತಹಸಿಲ್‌ನ ಖಮ್ಖೇಡಾ ಗ್ರಾಮದ ಪ್ರಹ್ಲಾದ್ ಎಂದು ದೃಢಪಟ್ಟಿತ್ತು.
ಪಿಒಕೆಯಲ್ಲಿ ಸಿಕ್ಕಿಬಿದ್ದಿದ್ದ ಪ್ರಹ್ಲಾದ್ ಸಿಂಗ್
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಪ್ರಹ್ಲಾದ್ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನಿ ರೇಂಜರ್‌ಗಳ ಕೈಗೆ ಸಿಕ್ಕಿಬಿದ್ದಿದ್ದ. ಸುಮಾರು ಒಂದೂವರೆ ತಿಂಗಳು ಪಿಒಕೆಯಲ್ಲಿ ಇರಿಸಲ್ಪಟ್ಟ ನಂತರ ಅವರನ್ನು ರಾವಲ್ಪಿಂಡಿಯ ಜೈಲಿಗೆ ಕಳುಹಿಸಲಾಯಿತು.
ಪ್ರಹ್ಲಾದ್ ಸಿಂಗ್ರನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕ್
ಇಂದು ಪಾಕಿಸ್ತಾನ ಸರ್ಕಾರವು ಪ್ರಹ್ಲಾದ್ನನ್ನು ವಾಘಾ ಅಟ್ಟಾರಿ ಗಡಿಯಲ್ಲಿ ಔಪಚಾರಿಕತೆವಾಗಿ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇದೀಗ ಅವರು ತಮ್ಮ ಕುಟುಂಬಸ್ಥರೊಂದಿಗೆ ತಮ್ಮ ಮನೆಗೆ ಹಿಂದಿರುಗಿದ್ದಾರೆ
ಮಾನಸಿಕ ಅಸ್ವಸ್ಥನಾಗಿದ್ದ ಪ್ರಹ್ಲಾದ್ ಸಿಂಗ್
ಪ್ರಹ್ಲಾದ್ ಸಿಂಗ್, ಕೀಲಾಲ್ ರಜಪೂತ್ ಅವರ ಮಗ. ಏಪ್ರಿಲ್ 17, 1965 ರಂದು ಖಮ್ಖೇಡಾ ಗ್ರಾಮದ ಘೋಸಿ ಪಟ್ಟಿಯಲ್ಲಿ ಜನಿಸಿದರು. ಮೊದಲಿನಿಂದಲೂ, ಆತ ಮಾನಸಿಕ ಅಸ್ವಸ್ಥನಾಗಿದ್ದನು. ಅವನಿಗೆ 33 ವರ್ಷ ವಯಸ್ಸಾಗಿದ್ದಾಗ, ಇದ್ದಕ್ಕಿದ್ದಂತೆ ಅವನು ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತನನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಪತ್ರಿಕೆ ಮೂಲಕ ಮಾಹಿತಿ ಪಡೆದಿದ್ದ ವೀರ್ ಸಿಂಗ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಹ್ಲಾದ್ ಅವರ ಹಿರಿಯ ಸಹೋದರ ವೀರ್ ಸಿಂಗ್ ರಜಪೂತ್, 1998 ರಲ್ಲಿ ಆತ ನಾಪತ್ತೆಯಾಗಿದ್ದು ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ. 2014 ರಲ್ಲಿ ಪತ್ರಿಕೆಯೊಂದರ ವರದಿಯ ಮೂಲಕ ಪ್ರಹ್ಲಾದ್ ಪಾಕಿಸ್ತಾನದಲ್ಲಿ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ತಿಳಿಯಿತು. ನಾನು ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿ, ತನ್ನ ಸಹೋದರನನ್ನು ಪತ್ತೆಹಚ್ಚಲು ಕೇಳಿಕೊಂಡಿದ್ದೆ. ಆದರೂ, ಪ್ರಯೋಜನವಾಗಿರಲಿಲ್ಲ ಎಂದರು.
2015 ರಲ್ಲೇ ಸಿಕ್ಕಿತ್ತು ಸುಳಿವು
2015 ರಲ್ಲಿ, ಪಾಕಿಸ್ತಾನ ಸರ್ಕಾರವು ಪ್ರಹ್ಲಾದ್ ಬಂಧನದ ಬಗ್ಗೆ ಭಾರತ ಸರ್ಕಾರಕ್ಕೆ ತಿಳಿಸಿತ್ತು. ಅಂತಹ 17 ಕೈದಿಗಳು (ಮಾನಸಿಕ ಅಸ್ವಸ್ಥರು) ಪಾಕ್ ಜೈಲಿನಲ್ಲಿದ್ದು, ಅವರ ಹೆಸರು ಮತ್ತು ವಿಳಾಸಗಳನ್ನು ಸರಿಯಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಈ ಮಾಹಿತಿಯು ಭಾರತದಲ್ಲಿ ನಾಪತ್ತೆಯಾದವರ ಸಂಬಂಧಿಕರು ನೀಡಿದ ಮಾಹಿತಿಯೊಂದಿಗೆ ಹೊಂದಾಣಿಕೆಯಾದಾಗ, ಪಾಕಿಸ್ತಾನದ ಜೈಲಿನಲ್ಲಿ ಪ್ರಹ್ಲಾದ್ ಎಂಬ ವ್ಯಕ್ತಿ ಇದ್ದಾನೆಂದು ತಿಳಿಯಿತು. ಆದರೆ ಅವನ ಹೆಸರನ್ನು ಹೊರತುಪಡಿಸಿ, ಅವನ ವಿಳಾಸ ಮತ್ತು ಇತರ ಮಾಹಿತಿಯನ್ನು ಕಂಡುಹಿಡಿಯಲಾಗಲಿಲ್ಲ ಎಂದು ಎಸ್ಪಿ ಅತುಲ್ ಸಿಂಗ್ ಹೇಳಿದ್ದಾರೆ.