ಕಟ್ನಿ(ಮಧ್ಯಪ್ರದೇಶ): ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಚಾಕಾ ಗ್ರಾಮ ಪಂಚಾಯಿತಿಯಲ್ಲಿ ಸರಪಂಚ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಹಿಷಾ ಬೇಗಂ ಗೆಲುವಿನ ನಂತರ ಈ ರೀತಿ ಘೋಷಣೆ ಕೂಗಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಶನಿವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕುತ್ಲಾ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ವಿಡಿಯೋ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಕಟ್ನಿಯ ಚಾಕ ಗ್ರಾಮ ಪಂಚಾಯತಿಗೆ ಶುಕ್ರವಾರ 2ನೇ ಹಂತದಲ್ಲಿ ಚುನಾವಣೆ ಪೂರ್ಣಗೊಂಡಿದೆ. ತಡರಾತ್ರಿಯವರೆಗೂ ನಡೆದ ಮತ ಎಣಿಕೆಯಲ್ಲಿ ಅಭ್ಯರ್ಥಿ ರಹಿಷಾ ಬೇಗಂ ಅವರ ಗೆಲುವನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೊದಲೇ ವಿಜಯದ ಆಚರಣೆಗಳು ಪ್ರಾರಂಭಗೊಂಡಿದ್ದವು. ವಿಜಯೋತ್ಸವ ಸಂದರ್ಭದಲ್ಲಿ ರಹಿಷಾ ಬೇಗಂ ಅವರ ಮನೆಯ ಹೊರಗೆ ರಾತ್ರಿ ರಹಿಷಾ ಬೇಗಂ ಜಿಂದಾಬಾದ್ ಜೊತೆಗೆ ಪಾಕಿಸ್ತಾನ ಪರವೂ ಘೋಷಣೆ ಕೂಗಿದ್ದಾರೆ.
ಇಡೀ ವಿಷಯಕ್ಕೆ ಸಂಬಂಧಿಸಿದಂತೆ, ಕಟ್ನಿ ಸಿಎಸ್ಪಿ ವಿಜಯ್ ಪ್ರತಾಪ್ ಸಿಂಗ್ ತನಿಖೆ ಕೈಗೊಂಡಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಪ್ರಸ್ತುತ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆಯೂ ತನಿಖೆ ನಡೆಸಬೇಕು. ತನಿಖೆಯಲ್ಲಿ ತಿಳಿದು ಬಂದ ಅಂಶಗಳ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಮನೆ ನಿರ್ಮಾಣ ಆರೋಪ: ಚಿಕ್ಕಮಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಜೆಸಿಬಿ